ಬೆಂಗಳೂರು, (ಜುಲೈ.12); ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾದಲ್ಲಿ ನಡೆದಿದೆ ಎನ್ನಲಾದ ಹಗರಣ ಖಂಡಿಸಿ ಪ್ರತಿಭಟನೆ ನಡೆಸಲು ಮೈಸೂರಿಗೆ ತೆರಳುತ್ತಿದ್ದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದ ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಮಾಹಿತಿ ತಿಳಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಅಶ್ವಥ್ ನಾರಾಯಣ ಪೊಲೀಸರಿಗೆ ಕಣ್ ತಪ್ಪಿಸಿ ಮೈಸೂರಿನ ಪ್ರತಿಭಟನೆ ಸ್ಥಳಕ್ಕೆ ಗೂಡ್ಸ್ ಟೆಂಪೊದಲ್ಲಿ ತೆರಳಿ ಪ್ರತಿಭಟನೆ ಮುಂದಾದರು. ಆದರೆ ಪೊಲೀಸರು ಅವರನ್ನು ಬಂಧಿಸಿದರು.
ಈ ಕುರಿತು ಟ್ವಿಟ್ ಮಾಡಿರುವ ಆರ್.ಅಶೋಕ, ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಸ್ವಯಂಘೋಷಿತ ಸಂವಿಧಾನ ರಕ್ಷಕ ಸಿಎಂ ಸಿದ್ದರಾಮಯ್ಯ ಅವರೇ, ತಮ್ಮ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಲು ಬಿಜೆಪಿ ನಾಯಕರು ಮೈಸೂರಿಗೆ ಹೊರಟಿದ್ದರೆ, ಪೊಲೀಸರನ್ನು ಬಳಸಿಕೊಂಡು ನಮ್ಮನ್ನ ಮಾರ್ಗ ಮಧ್ಯದಲ್ಲೇ ತಡೆಯುವ ಮೂಲಕ ಸರ್ವಾಧಿಕಾರಿ ಧೋರಣೆ ಪ್ರದರ್ಶನ ಮಾಡುತ್ತಿದ್ದೀರಲ್ಲ.. ತಮ್ಮ ನಾಯಕ ರಾಹುಲ್ ಗಾಂಧಿ ಅವರು ಪ್ರದರ್ಶನ ಮಾಡುವ ಸಂವಿಧಾನದಲ್ಲಿ, ವಿಪಕ್ಷಗಳಿಗೆ ಹೋರಾಟ ಮಾಡುವ ಹಕ್ಕಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ತಮ್ಮ ಕಾಂಗ್ರೆಸ್ ಪಕ್ಷ ಪ್ರತಿಪಾದಿಸುವ ಪ್ರಜಾಪ್ರಭತ್ವದಲ್ಲಿ ವಿರೋಧ ಪಕ್ಷಗಳು ಸರ್ಕಾರವನ್ನ ಪ್ರಶ್ನಿಸುವುದು ಅಪರಾಧವೇ..?, ಪೊಲೀಸರನ್ನು ಬಳಸಿಕೊಂಡು ವಿಪಕ್ಷ ನಾಯಕರು ಪ್ರತಿಭಟನೆ ಮಾಡಲು ಮೈಸೂರಿಗೆ ಹೋಗುವುದನ್ನು ತಡೆಯುತ್ತಿದ್ದೀರಲ್ಲ, ಕರ್ನಾಟಕದಲ್ಲಿ ಏನು ಅಘೋಷಿತ ತುರ್ತು ಪರಿಸ್ಥಿತಿ ಇದೆಯೇ?
ತಮ್ಮ ಆತ್ಮಸಾಕ್ಷಿ ಶುದ್ಧವಾಗಿದ್ದರೆ, ತಾವು ಹೇಳಿಕೊಳ್ಳುವಂತೆ ತಾವು ಪ್ರಾಮಾಣಿಕರಾದರೆ, ಮುಡಾ ಹಗರಣವನ್ನ ಸಿಬಿಐಗೆ ಒಪ್ಪಿಸಿ. ನಿಮ್ಮ ತಪ್ಪಿಲ್ಲವಾದರೆ ಸಿಬಿಐಗೆ ಕೊಡಲು ಭಯವೇಕೆ ಸಿಎಂ ಸಿದ್ದರಾಮಯ್ಯ ನವರೇ? ಎಂದು ಸರಣಿ ಪ್ರಶ್ನೆ ಮಾಡಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….