ಬೆಂಗಳೂರು, (ಜುಲೈ.03); ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ 187 ಕೋಟಿ ರೂ. ಅವ್ಯವಹಾರದ ಆರೋಪದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಇಂದು ಬಿಜೆಪಿ ನಾಯಕರು ಬೆಂಗಳೂರಿನ ಸಿಎಂ ಸರ್ಕಾರಿ ನಿವಾಸ ಕಾವೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಂಡ ಬಿಜೆಪಿ ನಾಯಕರು ಮುಖ್ಯಮಂತ್ರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.
ಕುಮಾರ ಕೃಪ ಅತಿಥಿ ಗೃಹದಿಂದ ಸಿಎಂ ನಿವಾಸಕ್ಕೆ ಮೆರವಣಿಗೆ ಮೂಲಕ ತೆರಳದ ಬಿಜೆಪಿ ನಾಯಕರು ಕಾವೇರಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.
ಕುಮಾರಕೃಪ ಅತಿಥಿ ಗೃಹದ ಬಳಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಕುಮಾರ ಕೃಪದಿಂದ ಕಾವೇರಿ ನಿವಾಸದವರಿಗೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಸಿಎಂ ಕಚೇರಿಗೆ ಮುತ್ತಿಗೆ ಹಾಕಲು ಬಿಜೆಪಿ ನಾಯಕರು ಯತ್ನಿಸಿದಾಗ ಅವರನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾದರು. ಈ ವೇಳೆ ಪೊಲೀಸರು ಹಾಗೂ ಬಿಜೆಪಿ ನಾಯಕರ ನಡುವೆ ವಾಗ್ವಾದ ನಡೆಯಿತು.
ಮಾಜಿ ಸಚಿವ ಸುನಿಲ್ ಕುಮಾರ್ ಹಾಗೂ ಪೊಲೀಸ್ ಅಧಿಕಾರಿಗಳ ನಡುವೆ ವಾಗ್ವಾದ ನಡೆದಿದೆ. ಪ್ರತಿಭಟನೆ ನಿಲ್ಲಿಸಿದ್ದೇವೆ. ರಸ್ತೆಯಲ್ಲಿ ಹೋಗೊದಕ್ಕೆ ಬಿಡಿ ಎಂದು ಸುನಿಲ್ ಕುಮಾರ್ ಪೊಲೀಸರ ಮೇಲೆ ಹರಿಹಾಯ್ದರು.
ಈ ವೇಳೆ ಪೊಲೀಸರು ಸುನಿಲ್ ಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಿಟಿ.ರವಿ, ಶಾಸಕರಾದ ಗೋಪಾಲಯ್ಯ, ಎಂಎಲ್ ಸಿ ಅರುಣ್ , ಭಾರತಿ ಶೆಟ್ಟಿ ಸೇರಿದಂತೆ ಹಲವರನ್ನ ಪೊಲೀಸರು ವಶಕ್ಕೆ ಪಡೆದರು.
ಮತ್ತೊಂದೆಡೆ ವಿಪಕ್ಷ ನಾಯಕ ಆರ್. ಅಶೋಕ ಅವರನ್ನು ಖಾಸಗಿ ಸುದ್ದಿ ವಾಹಿನಿಗೆ ಪ್ರತಿಕ್ರಿಯೆ ನೀಡುವ ವೇಳೆ ಸುದ್ದಿ ವಾಹಿನಿಯ ಲೋಗೋ,ಮೈಕ್ ಸಮೇತ ಆರ್.ಅಶೋಕ ಅವರನ್ನು ಪೊಲೀಸರು ಎತ್ತಿಕ್ಕೊಂಡು ಕರೆದೊಯ್ದರು..
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….