ದೊಡ್ಡಬಳ್ಳಾಪುರ, (ಜೂ.15); ತೀವ್ರವಾಗಿ ಕಾಡಿದ ಬರದ ನಡುವೆಯೂ ಕೇಂದ್ರ ಬಿಜೆಪಿ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನಮಂತ್ರಿ ಫಸಲ್ ವಿಮೆ ಯೋಜನೆಯು ತಾಲೂಕಿನ ರೈತರ ಕೈಹಿಡಿಯದೆ ಹೋಗಿದ್ದು, ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಿಮೆ ಕಟ್ಟಿದ ರೈತರ ಆಕ್ರೋಶ ವ್ಯಕ್ತವಾಗಿದೆ.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಮಪಾಲು ಭರಿಸುವ ಸದ್ಯದ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ವಿಮಾ ಕಂಪನಿಗಳ ಪರವಾಗಿದ್ದು, ವಿಮೆ ಕಂಪನಿ ಮತ್ತು ಕೃಷಿ ಅಧಿಕಾರಿಗಳು ಷಾಮೀಲಾಗಿ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂಬ ಆರೋಪ ರೈತರದ್ದಾಗಿದೆ.
ಕಳೆದ ವರ್ಷ ದೊಡ್ಡಬಳ್ಳಾಪುರ ತಾಲೂಕಿನಲ್ಲಿ 15545 ರೈತರು ಒಟ್ಟು ಫಸಲ್ ವಿಮೆಗೆ ಹಣ ಕಟ್ಟಿದ್ದು, ದೊಡ್ಡಬಳ್ಳಾಪುರ ತಾಲೂಕನ್ನು ಬರ ಪೀಡಿತ ಪ್ರದೇಶವೆಂದು ಸರಕಾರ ಘೋಷಿಸಿದ್ದರೂ ಕೂಡ ಕೇವಲ 4111ಮಂದಿ ರೈತರಿಗೆ ಮಾತ್ರ ಪರಿಹಾರ ನೀಡಲಾಗಿದೆ.
ಇದರಲ್ಲಿ ರಾಗಿ ಬೆಳೆಗೆ ವಿಮೆ ಮಾಡಿಸಿದ ದೊಡ್ಡಬಳ್ಳಾಪುರ ತಾಲೂಕಿನ ರೈತರಿಗೆ ತೀವ್ರ ಅನ್ಯಾಯವಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, 2023-24 ನೇ ಸಾಲಿನಲ್ಲಿ 12966 ರೈತರು ರಾಗಿ ಬೆಳೆಗೆ ವಿಮೆ ಹಣ ಪಾವತಿಸಿದರೆ, ಬಂದಿರುವುದು ಕೇವಲ 2668 ಮಂದಿಗೆ ಮಾತ್ರ.
ಉಳಿದಂತೆ ಜೋಳದ ಬೆಳೆಗೆ 2008 ರೈತರು ವಿಮೆ ಮಾಡಿಸಿದ್ದು, 1428 ರೈತರಿಗೆ ಮಾತ್ರ ಪರಿಹಾರ ದೊರೆತಿದೆ. ಅನಾವೃಷ್ಟಿಯಿಂದ ವ್ಯಾಪಕ ಬೆಳೆ ನಷ್ಟ ಸಂಭವಿಸಿದರೂ ವಿಮಾ ಕಂಪನಿ ತಾಲೂಕಿನ ರೈತರಿಗೆ ಅನ್ಯಾಯ ಎಸಗಿದೆ ಎಂಬ ಆರೋಪ ರೈತರದ್ದು.
ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಮಪಾಲು ಭರಿಸುವ ಒಪ್ಪಂದದಂತೆ ಜಾರಿ ಮಾಡಲಾಗಿದೆ. ಆದರೆ, ವಿಮಾ ಕಂಪನಿ ಆಯ್ಕೆ, ನಿಯಮಾವಳಿ ರಚನೆ ಅಧಿಕಾರ ಕೇಂದ್ರ ಸರಕಾರಕ್ಕಿದ್ದು, ಅನುಷ್ಠಾನ ಮಾತ್ರ ರಾಜ್ಯ ಸರಕಾರದ್ದಾಗಿದೆ. ಇಷ್ಟಾದರೂ, ಯೋಜನೆಯಿಂದ ರೈತ ಸಮುದಾಯಕ್ಕೂ ಅನುಕೂಲವಾಗುತ್ತಿಲ್ಲ. ನಷ್ಟ ಪರಿಹಾರಕ್ಕೆ ನಿಯಮಾವಳಿ ತೊಡಕುಗಳು ರೈತ ಹಿತಾಸಕ್ತಿಗೆ ವಿರುದ್ಧವಾಗಿವೆ.
ಫಸಲ್ ಬಿಮಾ ಯೋಜನೆ ರೈತರ ಶ್ರಮದಲ್ಲಿ ವಿಮಾ ಕಂಪನಿಗಳು ಲಾಭ ಮಾಡಿಕೊಳ್ಳಲು ಪೂರಕವಾಗಿದೆ. ಕಂತು ಪಾವತಿಸಿ ಬೆಳೆ ವಿಮೆ ಮಾಡಿಸಿದ ರೈತರಿಗೆ, ಬೆಳೆ ನಷ್ಟವಾದರೂ ಪರಿಹಾರ ಮೊತ್ತ ಸಮರ್ಪಕವಾಗಿ ಸಿಗುತ್ತಿಲ್ಲ. ನಷ್ಟ ಪರಿಹಾರ ಬಯಸಿದ ಸಂದರ್ಭದಲ್ಲಿ ವಿಮಾ ಕಂಪನಿಗಳು ನಿಯಮಾವಳಿ ತೊಡಕು ಮುಂದಿಟ್ಟು ವಂಚಿಸುತ್ತಿವೆ ಎಂಬ ದೂರುಗಳಿವೆ. ಹೀಗಾಗಿ,ರೈತರಿಗೆ ಅನುಕೂಲವಾಗದ ಸದ್ಯದ ಯೋಜನೆ ಮುಂದುವರಿಸುವುದಕ್ಕೆ ಅರ್ಥವಿಲ್ಲ
ವಿಮಾ ಕಂಪನಿಗಳಿಂದ ರೈತರಿಗೆ ಆಗುತ್ತಿರುವ ಈ ಮೋಸದಲ್ಲಿ ಬ್ಯಾಂಕ್ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಪಿಡಿಒಗಳು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಷಾಮೀಲಾಗುತ್ತಿದ್ದಾರೆ ಎಂಬ ಆರೋಪ ವ್ಯಾಪಕವಾಗಿದೆ.
ಅಲ್ಲದೆ ನಿರಂತರ ಅನಾವೃಷ್ಟಿಯಿಂದ ನೊಂದಿರುವ ರೈತರ ಗಾಯದ ಮೇಲೆ ವಿಮೆ ಕಂಪನಿಗಳು ಬರೆ ಎಳೆಯುತ್ತಿರುವುದು ಕಣ್ಣಿಗೆ ಕಾಣುತ್ತಿದ್ದರು ಯಾವುದೇ ರಾಜಕಾರಣಿಗಳು ತುಟಿ ಬಿಚ್ಚದೆ ಮೌನಕ್ಕೆ ಶರಣಾಗಿರುವುದು ಅನ್ನದಾತರಿಗೆ ಮಾಡುತ್ತಿರುವ ದ್ರೋಹ ಎಂಬ ಆಕ್ರೋಶ ರೈತರದ್ದಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….