ಬೆಳಗಾವಿ: ಹಿಂದುಳಿದ ಬುಡಕಟ್ಟಿಗೆ ಸೇರಿರುವ ಅನಕ್ಷರತೆ, ಪಶುಪಾಲನೆ ವೃತ್ತಿನಿರತರಾಗಿರುವ ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಠ ಪಂಗಡ (ಎಸ್.ಟಿ)ಕ್ಕೆ ಸೇರಿಸಲು ಕೇಂದ್ರ ಸರ್ಕಾರ ಕೆಲವು ಸ್ಪಷ್ಟನೆಗಳನ್ನು ಕೇಳಿ ಪತ್ರ ಬರೆದಿದೆ.ಕುಲಶಾಸ್ತ್ರೀಯ ಅಧ್ಯಯನ ಮಾಡಿರುವ ತಜ್ಞರ ಮೂಲಕ ಮಾಹಿತಿ ಪಡೆದು ಕೇಂದ್ರಕ್ಕೆ ಶೀಘ್ರ ಸ್ಪಷ್ಟನೆಗಳನ್ನು ಕಳುಹಿಸಲಾಗುವುದು.ಕಾಡುಗೊಲ್ಲರ ಹಿತರಕ್ಷಣೆ ಹಾಗೂ ಪೂರ್ಣ ಪ್ರಮಾಣದ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸರ್ಕಾರ ಕಂಕಣಬದ್ಧವಾಗಿದೆ ಎಂದು ಕಾನೂನು,ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ವಿಧಾನಸಭೆಯಲ್ಲಿಂದು ನಿಯಮ 69ರಡಿ ಶಾಸಕರಾದ ಪೂರ್ಣಿಮಾ, ಕೆ.ಎಂ. ಶಿವಲಿಂಗೇಗೌಡ ಅವರು ನಡೆಸಿದ ಚರ್ಚೆಗೆ ಉತ್ತರ ಒದಗಿಸಿ ಮಾತನಾಡಿದರು.
ಕಾಡುಗೊಲ್ಲರನ್ನು ಎಸ್.ಟಿ. ವರ್ಗಕ್ಕೆ ಸೇರಿಸಬೇಕೆಂದು ಒತ್ತಾಯಿಸಿ 2010 ರಿಂದಲೂ ಹೋರಾಟ ನಡೆಯುತ್ತಿದೆ. ಮೈಸೂರು ವಿಶ್ವವಿದ್ಯಾಲಯದ ಮಾನವಶಾಸ್ತ್ರ ಅಧ್ಯಯನ ವಿಭಾಗದ ಡಾ. ಅನ್ನಪೂರ್ಣಮ್ಮ ಅವರ ನೇತೃತ್ವದಲ್ಲಿ ಕುಲಶಾಸ್ತ್ರೀಯ ಅಧ್ಯಯನ ಮಾಡಿ ಈ ಹಿಂದೆ 2014 ರಲ್ಲಿ ಕಾಡುಗೊಲ್ಲರನ್ನು ಎಸ್.ಟಿ.ಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಬಹಳ ದೀರ್ಘ ಅವಧಿಯ ನಂತರ ಇತ್ತೀಚೆಗೆ ಕೇಂದ್ರ ಸರ್ಕಾರವು ಪತ್ರ ಬರೆದು ಧಾರ್ಮಿಕ ಮತ್ತು ವೈವಾಹಿಕ ಆಚರಣೆಗಳಲ್ಲಿ ಈ ಸಮುದಾಯವು ಹಿಂದೂ ಧರ್ಮಕ್ಕೆ ಹೋಲುವ ಆಚರಣೆಗಳನ್ನು ರೂಢಿಸಿಕೊಂಡಿದೆ ಎಂದು ತಿಳಿಸಿದೆ. ಇದೀಗ ಮತ್ತೆ ತಜ್ಞರ ಸಮಿತಿಯ ಮೂಲಕ ಕಾಡುಗೊಲ್ಲರು ಹಿಂದೂಗಳಿಗಿಂತ ಎಲ್ಲ ಆಚರಣೆಗಲ್ಲಿ ಶೇ. ನೂರಕ್ಕೆ ನೂರರಷ್ಟು ಭಿನ್ನರಾಗಿದ್ದಾರೆ. ರೂಢಿಗಳು, ಆಚರಣೆಗಳಲ್ಲಿ ಬುಡಕಟ್ಟು ಸಂಸ್ಕøತಿಯಿದೆ. ಪತಿ ಮರಣ ಹೊಂದಿದರೂ ಸಹ ಮಹಿಳೆಯ ಬಳೆ ಒಡೆಯುವ, ಕುಂಕುಮ ಅಳಿಸಿ ವಿಧವೆ ಮಾಡುವ ಪದ್ಧತಿ ಇಲ್ಲದ ಏಕೈಕ ಸಮಾಜ ಕಾಡುಗೊಲ್ಲ ಜನಾಂಗವಾಗಿದೆ. ಸುಲಭವಾಗಿ ಬೆಂಕಿ, ಬಿಸಿಲು ಬೀಳದಿರುವ ಜಾಗೆಯಲ್ಲಿ ಅವರ ವಾಸಸ್ಥಳಗಳಿರುತ್ತವೆ. ಸಂಪೂರ್ಣವಾಗಿ ಕುರಿ ಕಾಯುವ ವೃತ್ತಿಯನ್ನೇ ಈ ಸಮುದಾಯ ಅವಲಂಬಿಸಿದೆ. ಈ ಎಲ್ಲ ಅಂಶಗಳನ್ನು ಆಧರಿಸಿ ತಜ್ಞರ ಮೂಲಕ ವರದಿ ಪಡೆದು ಶೀಘ್ರದಲ್ಲಿಯೇ ಕೇಂದ್ರ ಸರ್ಕಾರದ ಸಂಬಂಧಿಸಿದ ರಿಜಿಸ್ಟ್ರಾರ್ ಜನರಲ್ ಅವರಿಗೆ ಸ್ಪಷ್ಟನೆ ನಿಡಲಾಗುವುದು. ಎಲ್ಲೂ ನೆಲೆಯಿಲ್ಲದ ಈ ಸಮುದಾಯದ ಜೊತೆಗೆ ಸರ್ಕಾರವಿದೆ. ಸಮಾಜಕ್ಕೆ ಒಳ್ಳೆಯದನ್ನು ಮಾಡಲು ಸರ್ಕಾರ ಬದ್ಧವಾಗಿದೆ. ವಸತಿ ಸಚಿವರಾದ ವಿ.ಸೋಮಣ್ಣನವರು ವಿಶೇಷ ಕಾಳಜಿವಹಿಸಿ ಚಿತ್ರದುರ್ಗ, ತುಮಕೂರು ಜಿಲ್ಲೆಗಳ ಕಾಡುಗೊಲ್ಲರಿಗೆ ಸುಮಾರು 20 ಸಾವಿರಕ್ಕೂ ಅಧಿಕ ಮನೆಗಳನ್ನು ಒದಗಿಸಿದ್ದಾರೆ.ಗೊಲ್ಲರಹಟ್ಟಿಗಳಿಗೆ ಕುಡಿಯುವ ನೀರು,ರಸ್ತೆ ಮತ್ತಿತರ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನು ನೇಮಕ ಮಾಡಿ ಕೂಡಲೇ ಪೂರ್ಣ ಪ್ರಮಾಣದ ನಿಗಮ ಸ್ಥಾಪಿಸಲಾಗುವುದು ಎಂದರು.
ಇದಕ್ಕೂ ಮುನ್ನ ಶಾಸಕಿ ಕೆ.ಪೂರ್ಣಿಮಾ, ಕೆ.ಎಂ.ಶಿವಲಿಂಗೇಗೌಡ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಾಡುಗೊಲ್ಲ ಸಮುದಾಯದ ಸಾಮಾಜಿಕ ಸ್ಥಿತಿಗತಿಗಳನ್ನು ಸದನಕ್ಕೆ ವಿವರಿಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….