ದೊಡ್ಡಬಳ್ಳಾಪುರ: ಶುಕ್ರವಾರ ಸಂಜೆ ನಿಧನರಾದ ಕೇಂದ್ರದ ಮಾಜಿ ಸಚಿವ ಆರ್.ಎಲ್.ಜಾಲಪ್ಪ ಅವರ ಅಂತ್ಯಕ್ರಿಯೆ ದೊಡ್ಡಬಳ್ಳಾಪುರದ ಕೊಡಿಗೇಹಳ್ಳಿ ರಸ್ತೆಯ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದ ಕ್ಯಾಂಪಸ್ನಲ್ಲಿ ಶನಿವಾರ ಸಂಜೆ ನಡೆಯಲಿದ್ದು, ಸಿದ್ದತೆ ಕಾರ್ಯ ತೀವ್ರವಾಗಿ ನಡೆಯುತ್ತಿದೆ.
ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಅಪರ ಜಿಲ್ಲಾಧಿಕಾರಿ ವಿಜಯಾ.ಈ.ರವಿಕುಮಾರ್, ಉಪವಿಭಾಗಾಧಿಕಾರಿ ಅರುಳ್ ಕುಮಾರ್, ಎಸ್.ಪಿ ಕೋನ ವಂಶಿಕೃಷ್ಣ, ಡಿವೈಎಸ್ ಪಿ ನಾಗರಾಜ್, ತಹಶೀಲ್ದಾರ್ ಟಿ.ಎಸ್.ಶಿವರಾಜ್, ಸರ್ಕಲ್ ಇನ್ಸ್ ಪೆಕ್ಟರ್ ಎಂ.ಬಿ.ನವೀನ್ ಕುಮಾರ್ ಸೇರಿದಂತೆ ಅನೇಕ ಸಿಬ್ಬಂದಿ ನಗರದ ಜಾಲಪ್ಪ ಇಂಜಿನಿಯರಿಂಗ್ ಕಾಲೇಜ್ ನ ಅಂತ್ಯ ಸಂಸ್ಕಾರದ ಸ್ಥಳ ಅಂತಿಮ ದರ್ಶನಕ್ಕಾಗಿ ಸಾರ್ವಜನಿಕರಿಗೆ ಸಿದ್ಧಪಡಿಸಿರುವ ಸ್ಥಳ, ಮೆರವಣಿಗೆಯ ಮಾರ್ಗ ಹಾಗೂ ತೂಬಗೆರೆಯಲ್ಲಿ ಗ್ರಾಮಸ್ಥರ ದರ್ಶನಕ್ಕಾಗಿ ನಿಗದಿಪಡಿಸಿರುವ ಸ್ಥಳ ಎಲ್ಲವನ್ನೂ ವೀಕ್ಷಣೆ ಮಾಡಿದರು.
ಗಣ್ಯರ ಸಂತಾಪ: ಜಾಲಪ್ಪ ಅವರ ನಿಧಾನಕ್ಕೆ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದು, ಸಿದ್ದರಾಮಯ್ಯ,ಡಿಕೆ ಶಿವಕುಮಾರ್ ಸೇರಿದಂತೆ ಹಿರಿಯ ನಾಯಕರು, ಬಿಜೆಪಿ ನಾಯಕರು , ಸಚಿವರು ಸಂತಾಪ ಸೂಚಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಆರ್ ಎಲ್ ಜಾಲಪ್ಪ ಅವರು ರಾಜ್ಯ ರಾಜಕಾರಣದ ಹಿರಿಯ ಮುಖಂಡರು. ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಸಮಾಜಮುಖಿ ಕೆಲಸ ಮಾಡಿದ್ದರು. ಜಾಲಪ್ಪ ಅವರ ನಿಧನದಿಂದ ರಾಜ್ಯದ ಸಾತ್ವಿಕ ರಾಜಕಾರಣಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಅಗಲಿಕೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬದವರಿಗೆ ಕರುಣಿಸಲಿ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಮುಖ್ಯಮಂತ್ರಿಗಳು ಕೋರಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….