ಬೆಂ.ಗ್ರಾ.ಜಿಲ್ಲೆ: ರಾಜ್ಯ ಚುನಾವಣಾ ಆಯೋಗವು 2021ರ ಜೂನ್ ತಿಂಗಳಿಂದ 2022ರ ಮಾರ್ಚ್ ತಿಂಗಳ ಅವಧಿ ಮುಕ್ತಾಯವಾಗಲಿರುವ ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆ ಹಾಗೂ ಗ್ರಾಮ ಪಂಚಾಯತಿಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ/ ತೆರವಾಗಿರುವ ಸ್ಥಾನಗಳಿಗೆ ಉಪ ಚುನಾವಣೆಯನ್ನು ನಡೆಸಲು ಕರ್ನಾಟಕ ಗ್ರಾಮ ಸ್ವರಾಜ್ಯ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 308ಎಎ ಮತ್ತು 308ಎಬಿ ಅನ್ವಯ ಚುನಾವಣೆ ವೇಳಾಪಟ್ಟಿಯನ್ನು ಘೋಷಿಸಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೆ.ಶ್ರೀನಿವಾಸ್ ಅವರು ತಿಳಿಸಿದ್ದಾರೆ.
ಅವಧಿ ಮುಕ್ತಾಯವಾಗುವ ಗ್ರಾಮ ಪಂಚಾಯಿತಿಗಳಾದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಅರಳುಮಲ್ಲಿಗೆ ಗ್ರಾಮ ಪಂಚಾಯಿತಿಯ 18 ಸದಸ್ಯ ಸ್ಥಾನಗಳು, ದರ್ಗಾಜೋಗಿಹಳ್ಳಿಯ ಗ್ರಾಮ ಪಂಚಾಯಿತಿಯ 24 ಸದಸ್ಯ ಸ್ಥಾನಗಳು ಹಾಗೂ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಗ್ರಾಮ ಪಂಚಾಯಿತಿಯ 15 ಸದಸ್ಯ ಸ್ಥಾನಗಳು, ನಲ್ಲೂರು ಗ್ರಾಮ ಪಂಚಾಯಿತಿಯ 15 ಸದಸ್ಯ ಸ್ಥಾನಗಳಿಗೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ.
ಸಾರ್ವತ್ರಿಕ ಚುನಾವಣೆಯಲ್ಲಿ ಸದಸ್ಯರು ಆಯ್ಕೆಯಾಗದ (ನ್ಯಾಯಾಲಯ ಪ್ರಕರಣ/ಇತರೆ ಕಾರಣಗಳಿಗಾಗಿ) ಪೂರ್ಣ ಗ್ರಾಮಪಂಚಾಯಿತಿಯಾದ ನೆಲಮಂಗಲ ತಾಲ್ಲೂಕಿನ ತ್ಯಾಮಗೊಂಡ್ಲು ಗ್ರಾಮ ಪಂಚಾಯಿತಿಯ 21 ಸದಸ್ಯ ಸ್ಥಾನಗಳು ಹಾಗೂ 2021ನೇ ಸಾಲಿನಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ದೊಡ್ಡಬಳ್ಳಾಪುರ ತಾಲ್ಲೂಕಿನ 15-ತಿಪ್ಪೂರು ಗ್ರಾಮ ಪಂಚಾಯಿತಿ, ಹೊಸಕೋಟೆ ತಾಲ್ಲೂಕಿನ 14-ಕುಂಬಳಹಳ್ಳಿ, 21-ದೇವನಗುಂದಿ ಹಾಗೂ 26-ಮುತ್ಸಂದ್ರ ಗ್ರಾಮ ಪಂಚಾಯಿತಿಗಳ ತಲಾ 1 ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ.
ಚುನಾವಣಾ ವೇಳಾಪಟ್ಟಿಯಂತೆ 2021ರ ಡಿಸೆಂಬರ್ 17ರಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿದ್ದು, ಡಿಸೆಂಬರ್ 18ರಂದು ನಾಮಪತ್ರಗಳನ್ನು ಪರಿಶೀಲಿಸಲಾಗುವುದು. ಡಿಸೆಂಬರ್ 20ರಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಡಿಸೆಂಬರ್ 27ರಂದು ಮತದಾನ ಅವಶ್ಯವಿದ್ದರೆ ಬೆಳಿಗ್ಗೆ 7:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ಮತದಾನ ನಡೆಯಲಿದೆ. ಡಿಸೆಂಬರ್ 29ರಂದು ಮರು ಮತದಾನ ಅವಶ್ಯವಿದ್ದರೆ, ಬೆಳಿಗ್ಗೆ 7:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ಮರುಮತದಾನ ನಡೆಯಲಿದೆ. ಡಿಸೆಂಬರ್ 30ರ ಗುರುವಾರದಂದು ತಾಲ್ಲೂಕು ಕೇಂದ್ರಗಳಲ್ಲಿ ಬೆಳಿಗ್ಗೆ 8:00 ಗಂಟೆಯಿಂದ ಮತಗಳ ಏಣಿಕೆ ಕಾರ್ಯ ನಡೆಯಲಿದ್ದು, ಡಿಸೆಂಬರ್ 30ರಂದು ಚುನಾವಣಾ ಮಾದರಿ ನೀತಿ ಸಂಹಿತೆ ಮುಕ್ತಾಯಗೊಳ್ಳಲಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೆ.ಶ್ರೀನಿವಾಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ: ತಿಪ್ಪೂರು ಗ್ರಾಮಪಂಚಾಯಿತಿ ಸದಸ್ಯ ನಿತಿನ್ ಗೌಡರ ಅಕಾಲಿಕ ಮರಣದಿಂದ ತೆರವಾಗಿದ್ದ ಸದಸ್ಯ ಸ್ಥಾನಕ್ಕೆ ಇಂದು (ಡಿ.13) ಎರಡು ನಾಮ ಪತ್ರ ಸಲ್ಲಿಕೆಯಾಗಿದೆ.
ಚುನಾವಣಾಧಿಕಾರಿ ಹರೀಶ್ ಕುಮಾರ್ ನೇತೃತ್ವದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಚೆನ್ನರಾಮಯ್ಯ ಹಾಗೂ ಬೈರೇಗೌಡ ನಾಮಪತ್ರ ಸಲ್ಲಿಸಿದ್ದಾರೆ.
ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಚೆನ್ನರಾಮಯ್ಯ ನಾಮಪತ್ರ ಸಲ್ಲಿಸುವ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಮುನೇಗೌಡ ಮತ್ತಿತರರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….