ಬೆಂಗಳೂರು: ರಾಜ್ಯ ರಾಜಕೀಯ ವಲಯದಲ್ಲಿ ಕೋಲಾಹಲ ಎಬ್ಬಿಸಿದ್ದ ವಿಧಾನಪರಿಷತ್ ಸದಸ್ಯ ಗೋವಿಂದರಾಜು ಮನೆಯಲ್ಲಿ ಸಿಕ್ಕ ಡೈರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ವಿರುದ್ಧ ಇಂದಿರಾನಗರ ಠಾಣೆ ಪೊಲೀಸರು ದಾಖಲಿಸಿದ್ದ ಎಫ್ಐಆರ್ ನ್ನು ಹೈಕೋರ್ಟ್ ರದ್ದುಪಡಿಸಿದೆ.
ಎಫ್ಐಆರ್ ರದ್ದು ಕೋರಿ ಆದಾಯ ತೆರಿಗೆ (ತನಿಖೆ) ಮಹಾನಿರ್ದೇಶಕರು ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿರುವ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ, ಎಂಎಲ್ಸಿ ಗೋವಿಂದರಾಜು ನೀಡಿದ್ದ ದೂರು ಆಧರಿಸಿ ಐಟಿ ಅಧಿಕಾರಿಗಳ ವಿರುದ್ಧವೇ ಪೊಲೀಸರು ಎಫ್ಐಆರ್ ದಾಖಲಿಸಿರುವ ಕ್ರಮ ’ದುರುದ್ದೇಶದಿಂದ ಕೂಡಿದೆ ಎಂದು ಅಭಿಪ್ರಾಯಪಟ್ಟಿದೆ.
ಪೀಠ ತನ್ನ ತೀರ್ಪಿನಲ್ಲಿ, ಐಟಿ ಅಧಿಕಾರಿಗಳು ಗೋವಿಂದರಾಜು ಅವರ ಮನೆಯಲ್ಲಿ ನಡೆಸಿದ ಶೋಧ ಮತ್ತು ವಸ್ತುಗಳನ್ನು ವಶಕ್ಕೆ ಪಡೆಯುವ ಕಾರ್ಯಗಳನ್ನು ನಿಯಮದ ಪ್ರಕಾರವೇ ಮಾಡಿದ್ದಾರೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 293 ಪ್ರಕಾರ ಸರ್ಕಾರ ಮತ್ತು ಅದರ ಅಧಿಕಾರಿಗಳ ವಿರುದ್ಧ ಯಾವುದೇ ದಾವೆ, ವಿಚಾರಣೆ ಮತ್ತು ಇತರ ಪ್ರಕ್ರಿಯೆಗಳನ್ನು ನಡೆಸಲು ಅವಕಾಶವಿಲ್ಲ. ಅದರಂತೆ ಗೋವಿಂದರಾಜು ನೀಡಿದ್ದ ದೂರನ್ನು ಪೊಲೀಸರು ಮಾನ್ಯ ಮಾಡುವಂತಿಲ್ಲ ಮತ್ತು ಎಫ್ಐಆರ್ ದಾಖಲಿಸುವಂತೆಯೂ ಇಲ್ಲ. ದೂರು ನೀಡಿರುವ ಕೆ. ಗೋವಿಂದರಾಜು ಅವರಿಗೂ ಡೈರಿ ಬೇಕಾಗಿದೆ. ಇದೇ ವೇಳೆ ಪೊಲೀಸರಿಗೂ ಸಹ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದ ಡೈರಿ ಬೇಕಾಗಿದೆ ಎನ್ನುವುದು ಅಘಾತಕಾರಿ ಸಂಗತಿ. ಪೊಲೀಸರಿಗೆ ತನಿಖೆ ನಡೆಸಲು ಡೈರಿ ಹೊರತುಪಡಿಸಿ ಬೇರೆ ಯಾವುದೇ ವಸ್ತು ಬೇಕಾಗಿಲ್ಲ. ಇದನ್ನು ಗಮನಿಸಿದರೆ ಇಂದಿರಾನಗರ ಪೊಲೀಸ್ ಠಾಣೆಯ ಎಸ್‌ಎಚ್‌ಒ ದೂರುದಾರರ ಅಣತಿ ಮೇರೆಗೆ ನಡೆದುಕೊಂಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಅದಕ್ಕಾಗಿಯೇ, ಪೊಲೀಸರು ಅಪರಾಧ ದಂಡ ಸಂಹಿತೆ ಸೆಕ್ಷನ್ 91 ಬಳಸಿ ಆದಾಯ ತೆರಿಗೆ ಅಧಿಕಾರಿಗಳಿಗೆ ಸಮನ್ಸ್ ನೀಡಿದ್ದಾರೆ.
ಪ್ರಕರಣದ ಎಲ್ಲ ವಿವರಗಳನ್ನು ಗಮನಿಸಿದರೆ ಮತ್ತು ಪೊಲೀಸರ ಕಾರ್ಯ ವೈಖರಿ ಪರಿಶೀಲಿಸಿದರೆ ಎಫ್ಐಆರ್ ದಾಖಲಿಸಿದ್ದರ ಹಿಂದೆ ಅನ್ಯ ಉದ್ದೇಶವಿರುವುದು ಕಂಡುಬರುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಅಲ್ಲದೇ, ಐಟಿ ಕಾಯ್ದೆಯ ಸೆಕ್ಷನ್ 138ರ ಅಡಿ ದಾಖಲೆಗಳಲ್ಲಿ ಗೌಪ್ಯತೆ ಕಾಯ್ದುಕೊಳ್ಳುವ ಅಧಿಕಾರ ಆದಾಯ ತೆರಿಗೆ ಅಧಿಕಾರಿಗಳಿಗೆ ಇದೆ. ಇದಕ್ಕೆ ವಿರುದ್ಧವಾಗಿ ಪೊಲೀಸರು ನೀಡಿರುವ ನೋಟಿಸ್ ನಿಯಮಬಾಹಿರ. ಇನ್ನು, ನಿಯಮದಂತೆ ಒಮ್ಮೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಶೋಧ ಮತ್ತು ಪತ್ತೆ ಕಾರ್ಯ ನಡೆಸಿದ ನಂತರ ಯಾವುದೇ ಸಾರ್ವಜನಿಕ ಸಿಬ್ಬಂದಿಗೆ ಅದರ ವಿಚಾರಗಳನ್ನು ಅಥವಾ ಗೌಪ್ಯ ಮಾಹಿತಿಯನ್ನು ಹಂಚಿಕೊಳ್ಳುವಂತಿಲ್ಲ. ಅಂತಹ ಬಾಧ್ಯತೆಗಳೂ ಸಹ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಇಲ್ಲ ಎಂದು ಪೀಠ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 2016ರ ಮಾರ್ಚ 15ರಂದು ಎಂಎಲ್ ಸಿ ಕೆ. ಗೋವಿಂದರಾಜು ಮನೆ ಮೇಲೆ ದಾಳಿ ನಡೆಸಿ ಅವರ ಬೆಡ್ ರೂಮ್ ನಲ್ಲಿ ಸಿಕ್ಕ ಡೈರಿ ವಶಪಡಿಸಿಕೊಂಡಿದ್ದರು. ಆ ಡೈರಿಯಲ್ಲಿ ಉಲ್ಲೇಖಿಸಲಾಗಿದ್ದ ಅಂಶಗಳು ಮತ್ತು ಹೆಸರುಗಳನ್ನು ಆಧರಿಸಿ ಐಟಿ ಅಧಿಕಾರಿಗಳು ಹಲವು ವ್ಯಕ್ತಿಗಳು, ಸಚಿವರುಗಳನ್ನು ವಿಚಾರಣೆಗೆ ಕರೆಸಿ ಹೇಳಿಕೆ ದಾಖಲಿಸಿದ್ದರು.
ಗೋವಿಂದರಾಜು ಅವರಿಗೂ ಹೇಳಿಕೆಗಳ ಪ್ರತಿಯನ್ನು ನೀಡಲಾಗಿತ್ತು. 2017ರ ಫೆಬ್ರವರಿಯಲ್ಲಿ ಕೆಲ ಮಾಧ್ಯಮಗಳಲ್ಲಿ ಡೈರಿಗಳಲ್ಲಿನ ಅಂಶಗಳು ಬಹಿರಂಗವಾಗಿದ್ದವು.
ಈ ಹಿನ್ನೆಲೆಯಲ್ಲಿ ಫೆಬ್ರವರಿ 28ರಂದು ಗೋವಿಂದರಾಜು ಇಂದಿರಾನಗರ ಪೊಲೀಸ್ ಠಾಣೆಗೆ ತೆರಳಿ ಆದಾಯ ತೆರಿಗೆ ಅಧಿಕಾರಿಗಳೇ ಮಾಹಿತಿ ಸೋರಿಕೆ ಮಾಡಿದ್ದಾರೆಂದು ಆರೋಪಿಸಿ ದೂರು ನೀಡಿದ್ದರು. ಇದನ್ನು ಆಧರಿಸಿ ಪೊಲೀಸರು ಐಟಿ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಈ ಎಫ್ಐಆರ್ ಮತ್ತು ತನಿಖೆಗೆ ಹೈಕೋರ್ಟ್ 2017ರ ಜುಲೈನಲ್ಲಿ ತಡೆಯಾಜ್ಞೆ ನೀಡಿತ್ತು ಎಂದು ಲೀಗಲ್ ನ್ಯೂಸ್ ವರದಿ ತಿಳಿಸಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….