ದೊಡ್ಡಬಳ್ಳಾಪುರ: ನಗರದ ಕೊಂಗಾಡಿಯಪ್ಪ ಕಾಲೇಜು ಸಮೀಪದ ಬಯಲು ಬಸವಣ್ಣ ದೇವಸ್ಥಾನದ ಸೇವಾ ಟ್ರಸ್ಟ್, ಕರ್ನಾಟಕ ಕನ್ನಡ ಅಭಿಮಾನಿಗಳ ಸಂಘದ ವತಿಯಿಂದ 25ನೇ ವರ್ಷದ ಕಡಲೇಕಾಯಿ ಪರಿಷೆ, 66ನೇ ಕನ್ನಡ ರಾಜ್ಯೋತ್ಸವ ಹಾಗೂ ಸಂಘದ 27ನೇ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಬೆಳಿಗ್ಗೆ ಧ್ವಜಾರೋಹಣ ಹಾಗೂ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು.
ಕನ್ನಡ ರಾಜ್ಯೋತ್ಸವದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದ ಎಂ.ಎಸ್.ವಿ ಹಾಗೂ ಸರಸ್ವತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎ.ಸುಬ್ರಹ್ಮಣ್ಯ ಮಾತನಾಡಿ, ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಉತ್ತಮ ಸಮಾಜ ನಿರ್ಮಾಣವಾಗುವ ಅವಶ್ಯಕವಿದ್ದು, ದೇವಾಲಯ, ಉತ್ಸವ ಹಗೂ ಧಾರ್ಮಿಕ ಕಾರ್ಯಕ್ರಮಗಳು ಇದಕ್ಕೆ ಇಂಬು ನೀಡುತ್ತವೆ. ಬಯಲು ಬಸವಣ್ಣ ದೇವಾಲಯಕ್ಕೆ ಇತಿಹಾಸವಿದ್ದು, ಇಲ್ಲಿನ ಮಂಜುನಾಥ ಸ್ವಾಮಿಯ ಮಹಿಮೆಯನ್ನು ನಾನು ಕಣ್ಣಾರೆ ಕಂಡಿದ್ದೇನೆ. ಇಂತಹ ಸ್ಥಳದಲ್ಲಿ ಕಡಲೆಕಾಯಿ ಪರಿಷೆ ನಡೆಯುತ್ತಿರುವುದು ಅರ್ಥಪೂರ್ಣವಾಗಿದ್ದು, ಜಾತ್ರೆ ಉತ್ಸವಗಳು ಸಮಾಜದಲ್ಲಿ ಭಾವೈಕತೆಗೆ ಪೂರಕವಾಗುತ್ತವೆ ಎಂದರು.
ಕನ್ನಡ ನಾಡು ನುಡಿಗಾಗಿ ನಾವು ನಮ್ಮ ಕೈಲಾದ ಸೇವೆ ಮಾಡಬೇಕು. ಸಮಾಜಸೇವೆಗೆ ಮಹಾನ್ ನಟ ಪುನೀತ್ ರಾಜ್‍ಕುಮಾರ್ ಮಾದರಿಯಾಗಿದ್ದು, ದೊಡ್ಡಮಟ್ಟದಲ್ಲಿ ಅಲ್ಲದಿದ್ದರೂ ತಮ್ಮ ಕೈಲಾದ ಸೇವೆ ಮಾಡಬೇಕಿದೆ ಎಂದ ಅವರು, ದೇವಾಲಯ ನಿರ್ಮಾಣಕ್ಕೆ ತಮ್ಮ ಕೇಲಾದ ನೆರವು ಹಾಗೂ ಇಬ್ಬರು ಬಡ ವಿದ್ಯಾರ್ಥಿಗಳನ್ನು ದತ್ತು ಪಡೆದು ಪ್ರಾಥಮಿಕ ಶಾಲೆಯಿಂದ ಪದವಿ ಶಿಕ್ಷಣದ ತನಕ ಉಚಿತ ಶಿಕ್ಷಣ ನೀಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಯೋಧ ಎನ್.ಮಂಜುನಾಥ್, ದೊಣ್ಣೆ ವರಸೆ ಕಲಾವಿದ ಉಗನವಾಡಿ ನರಸಿಂಹಮೂರ್ತಿ, ಪೈಲ್ವಾನ್ ಪಿಳ್ಳಣ್ಣ, ಸಮಾಜ ಸೇವಕರಾದ ಡಿ.ಎಂ.ನಾಗರಾಜು, ಎಸ್.ಶಶಿಕುಮಾರ್, ಟಿ.ಎಸ್.ಕೃಷ್ಣಮೂರ್ತಿ, ಆರ್.ಶ್ರೀನಿವಾಸ್, ಡಿ.ಎಸ್.ಹನುಮಂತು, ಡಿ.ಎನ್.ತಿಮ್ಮರಾಜು, ಎ.ಕಾಂತರಾಜು, ಕೆ.ಆರ್.ಜ್ಞಾನಮೂರ್ತಿ, ಡಿ.ಚಿಕ್ಕಣ್ಣ ಅವರನ್ನು ಸನ್ಮಾನಿಸಲಾಯಿತು.
ಬಯಲು ಬಸವಣ್ಣ ದೇವಸ್ಥಾನದ ಸೇವಾ ಟ್ರಸ್ಟ್‍ನ ಅಧ್ಯಕ್ಷ ಡಿ.ಎಂ.ನಾಗರಾಜು ಅಧ್ಯಕ್ಷತೆ ವಹಿಸಿದ್ದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ, ಟ್ರಸ್ಟ್‌ನ ಗೌರವಅಧ್ಯಕ್ಷ ಎನ್.ನರಸಿಂಹಮೂರ್ತಿ, ಗೌರವಕಾರ್ಯದರ್ಶಿ ವಿ.ನಾಗರಾಜು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ಅಂಗವಾಗಿ ರೋಣೂರು ಲೋಕೇಶ್ ಪರ್ಫೆಕ್ಟ್ ತಂಡದಿಂದ ವಾದ್ಯಗೋಷ್ಟಿ ಹಾಗೂ ಭರತನಾಟ್ಯ ಕಾರ್ಯಕ್ರಮ ನಡೆಯಿತು.
ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….