ದೊಡ್ಡಬಳ್ಳಾಪುರ: ತಾಲ್ಲೂಕಿನ ಚಿಗರೇನಹಳ್ಳಿ ಸಮೀಪದ ಎಂಎಸ್ಜಿಪಿ ಕಸ ವಿಲೇವಾರಿ ಘಟಕದಿಂದ ಹೊರ ಬರುತ್ತಿರುವ ರಾಸಾಯನಿಕ ಯುಕ್ತ ಕೊಳಚೆ ನೀರು ತಡೆದು ನಿಲ್ಲಿಸಲು ತಡೆಗೋಡೆ ನಿರ್ಮಿಸುವ ಸಲುವಾಗಿ ಕಟ್ಟಡ ಸಾಮಗ್ರಿಗಳನ್ನು ಸಾಗಾಣಿಕೆ ಮಾಡಲು ರಸ್ತೆ ತಡೆ ತೆರವು ಮಾಡುವಂತೆ ತಾಲ್ಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಮಾಡಿದ ಮನವಿಗೆ ಧರಣಿ ನಿರತ ಗ್ರಾಮಸ್ಥರು ನಿರಾಕರಿಸಿದ್ದು ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ಭಾನುವಾರ ಅಧಿಕಾರಿಗಳು ವಾಪಾಸಾಗಿದ್ದಾರೆ.
ತಹಶೀಲ್ದಾರ್ ಟಿ.ಎಸ್.ಶಿವರಾಜ್, ಡಿವೈಎಸ್ಪಿ ನಾಗರಾಜ್ ಅವರು ಧರಣಿ ನಿರತರೊಂದಿಗೆ ಮಾತುಕತೆ ನಡೆಸಿ ಕಸದಿಂದ ಉಂಟಾಗಿರುವ ಎಲ್ಲಾ ಸಮಸ್ಯೆಗಳನ್ನು ತುರ್ತಾಗಿ ಬಗೆಹರಿಸುವ ಹಾಗೂ ಕೊಳಚೆ ನೀರು ಗ್ರಾಮಗಳ ಕಡೆಗೆ ಹಳ್ಳಗಳ ಮೂಲಕ ಹರಿದು ಬರದಂತೆ ತಡೆಯುವುದು ಸೇರಿದಂತೆ ಹಲವಾರು ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಬಗೆಹರಿಸುವುದಾಗಿ ತಿಳಿಸಿದರು. ಆದರೆ ಧರಣಿ ನಿತರು ಈ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣವಾಗಿರುವ ಕಸ ಇಲ್ಲಿಗೆ ಬರುವುದನ್ನು ನಿಲ್ಲಿಸಿ. ಉಳಿದೆಲ್ಲಾ ಸಮಸ್ಯೆಗಳು ತಾವಿಗೇ ಬಗೆಹರಿಯಲಿವೆ ಎಂದು ಹೇಳುವ ಮೂಲಕ ಧರಣಿಯನ್ನು ಮುಂದುವರೆಸಿದ್ದಾರೆ.
ಧರಣಿಯಲ್ಲಿ ಭಾಗವಹಿಸಿರುವ ಕೆ.ವಿ.ಸತ್ಯಪ್ರಕಾಶ್, ಅಶ್ವತ್ಥನಾರಾಯಣಗೌಡ, ಗೋವಿಂದರಾಜು, ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದಲಿಂಗಯ್ಯ ಮಾತನಾಡಿ, ತಾಲ್ಲೂಕು ಆಡಳಿತ ಸೇರಿದಂತೆ ಧರಣಿ ನಿರತ ಸ್ಥಳಕ್ಕೆ ಭೇಟಿ ನೀಡುತ್ತಿರುವ ಎಲ್ಲಾ ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ಕುರಿತು ಬಣ್ಣದ ಮಾತುಗಳನ್ನು ಹೇಳುತ್ತಿದ್ದಾರೆ. ಇದೇ ರೀತಿಯ ಬಣ್ಣದ ಮಾತುಗಳನ್ನು ಎರಡು ವರ್ಷಗಳ ಹಿಂದೆ ಧರಣಿ ನಡೆಸಿದಾಗಲು ಹೇಳಲಾಗಿತ್ತು. ಇವರ ಮಾತುಗಳನ್ನು ನಂಬಿಯೇ ಅಂದು ಧರಣಿಯನ್ನು ಹಿಂದಕ್ಕೆ ಪಡೆಯಲಾಗಿತ್ತು. ಆದರೆ ಧರಣಿ ಅಂತ್ಯಗೊಂಡ ದಿನ ಕಣ್ಮರೆಯಾದ ಅಧಿಕಾರಿಗಳು ಈಗ ಧರಣಿ ಆರಂಭವಾಗುತ್ತಿದ್ದಂತೆ ಮತ್ತೆ ತಮ್ಮ ಹಳೇ ಚಾಳಿಯನ್ನು ಮುಂದುವರೆಸುತ್ತ ಭರವಸೆಯ ನಾಟಕದ ಮಾತುಗಳನ್ನು ಜನರ ಮುಂದೆ ಪುಂಕಾನುಪುಂಕವಾಗಿ ಹೇಳುವ ಮೂಲಕ ನಾವು ಧರಣಿ ನಡೆಸುತ್ತಿರುವುದೇ ದೊಡ್ಡ ತಪ್ಪು ಎನ್ನುವಂತೆ ಬಿಂಬಿಸಲು ಹಾಗೂ ತಾವು ಧರಣಿ ನಿಲ್ಲಿಸಲು ಎಷ್ಟೆಲ್ಲಾ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಸಚಿವರುಗಳನ್ನು ಮೆಚ್ಚಿಸಲು ನಾಟಕ ಮಾಡುತ್ತಿದ್ದಾರೆ.
ಈ ಬಾರಿ ಧರಣಿ ಆರಂಭಕ್ಕು ಮುನ್ನ ಅಧಿಕಾರಿಗಳ, ಸಚಿವರುಗಳ ಯಾವುದೇ ಭರವಸೆಗಳನ್ನು ನಂಬದೆ ಬೆಂಗಳೂರಿನ ಕಸ ಇಲ್ಲಿಗೆ ತರುವುದನ್ನು ನಿಲ್ಲಿಸುವ ಕುರಿತಂತೆ ಲಿಖಿತವಾಗಿ ಮಾಹಿತಿ ನೀಡಿದರಷ್ಟೆ ಧರಣಿಯನ್ನು ಹಿಂದಕ್ಕೆ ಪಡೆಯಲಾಗುವುದು ಎಂದು ಹೇಳಿದ್ದಾರೆ.
ನಾಳೆ ಪರಿಸರ ಮಾಲಿನ್ಯ ನಿಯಂತ್ರ ಮಂಡಳಿ ಅಧಿಕಾರಿಗಳು ಎಂಎಸ್ ಜಿಪಿ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….