![Channel Gowda](https://www.harithalekhani.com/wp-content/uploads/2025/02/IMG-20250204-WA0002.jpg)
ದೊಡ್ಡಬಳ್ಳಾಪುರ: ರೈತರಿಗೆ ಮಾಹಿತಿ ಹಾಗೂ ಪರಿಹಾರ ನೀಡದೆ ತಾಲ್ಲೂಕಿನ ತಳಗವಾರ, ಕೋಳೂರು, ಕಂಟನಕುಂಟೆ, ಅರಳುಮಲ್ಲಿಗೆ, ಅಣಗಲಪುರ ಮುಂತಾದ ತಾಲೂಕಿನ ಸುಮಾರು 20 ಗ್ರಾಮಗಳ ಮೂಲಕ ಹಾದು ಹೋಗಿದ್ದ ಅಲ್ಪ ಪ್ರಮಾಣದ ವಿದ್ಯುತ್ ಲೈನ್ಗೆ ಬದಲಾಗಿ ಬೃಹತ್ ಕಂಬಗಳು ಹಾಗೂ ಬಹು ಮಾರ್ಗದ ಲೈನ್ ಅಳವಡಿಸಲು ಮುಂದಾಗಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ನವೆಂಬರ್ 10ರಂದು ತಾಲೂಕು ಕಚೇರಿ ಮುತ್ತಿಗೆ ಹಾಕಲಾಗುವುದೆಂದು ರೈತ ಸಂಘದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಸತೀಶ್ ತಿಳಿಸಿದರು.
![hulukudi maharathotsava](https://www.harithalekhani.com/wp-content/uploads/2025/02/IMG-20250205-WA0002.jpg)
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಹಲವಾರು ಕಾರಣಗಳಿಂದಾಗಿ ರೈತರಿಗೆ ಈಗ ಉಳಿದಿರುವುದೇ ತುಂಡು ಭೂಮಿ. ಅಲ್ಪಸ್ವಲ್ಪ ಕೃಷಿ ಭೂಮಿಯಲ್ಲಿ ಬೃಹತ್ ಗಾತ್ರದ ವಿದ್ಯುತ್ ಕಂಬಗಳನ್ನು ಅಳವಡಿಸಿದರೆ ಕೃಷಿ ಮಾಡಲು ಸಾಧ್ಯವೇ ಇಲ್ಲದಾಗಲಿದೆ. ಈ ಕಾಮಗಾರಿ ಕೆಪಿಟಿಸಿಎಲ್ ಮಾಡುತ್ತಿದೆಯೋ, ಗ್ರೀಡ್ ಮಾಡುತ್ತಿದೆಯೋ ಮಾಹಿತಿಯೇ ಇಲ್ಲವಾಗಿದೆ.
![Hulukudi mahajathre](https://www.harithalekhani.com/wp-content/uploads/2025/02/IMG-20250205-WA0001.jpg)
ರೈತರಿಗೆ ಯಾವುದೇ ಮಾಹಿತಿ ನೀಡದೆ ಕಂಬಗಳನ್ನು ಅಳವಡಿಸಲು ಗುಂಡಿಗಳನ್ನು ತೋಡಲು ಮುಂದಾಗಿರುವುದು ಖಂಡನಿಯ. ಭೂಮಿ ಕಳೆದುಕೊಳ್ಳುವ ರೈತರಿಗೆ ನಿಯಮದ ಪ್ರಕಾರ ಸೂಕ್ತ ಪರಿಹಾರ ನೀಡದೆ ಹಾಗೂ ರೈತರ ಅನುಮತಿ ಇಲ್ಲದೆ ಜಮೀನಿಗೆ ಪ್ರವೇಶಿಸಿ ಗುರುತು ಮಾಡುತ್ತಿರುವುದು ಖಂಡನೀಯ. ಕಂದಾಯ ಇಲಾಖೆ ಅಧಿಕಾರಿಗಳು ಭೂಮಿ ಸರ್ವೆ ನಡೆಸಿ ಪರಿಹಾರ ನಿಗದಿ ಮಾಡಬೇಕಿದೆ, ಇದನ್ನು ಹೊರತು ಪಡಿಸಿ ಬಲವಂತದಿಂದ ಕಾಮಗಾರಿ ನಡೆಸಲು ಮುಂದಾದರೆ ಮುಂದಾಗುವ ಅನಾಹುತಕ್ಕೆ ಜಿಲ್ಲಾಡಳಿತವೇ ಹೊಣೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು.
ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಬಚ್ಚಹಳ್ಳಿ ಸತೀಶ್ ಮಾತನಾಡಿ, ಗೌರಿಬಿದನೂರಿನಿಂದ ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶ ಮತ್ತು ತೊಂಡೆಬಾವಿಯಿಂದ ದೊಡ್ಡಬಳ್ಳಾಪುರಕ್ಕೆ 220 ರಿಂದ 400ಕೆವಿ ವಿದ್ಯುತ್ ಕಾರಿಡಾರ್ ಮಾರ್ಗಗಳನ್ನು ಮಾಡಲಾಗುತ್ತಿದೆ. ಇದರ ಕುರಿತು ರೈತರಿಗೆ ಮಾಹಿತಿಯೇ ನೀಡದೆ, ಜಮೀನುಗಳಿಗೆ ಅತಿಕ್ರಮ ಪ್ರವೇಶ ಮಾಡಿ ಗುರುತು ಮಾಡುತ್ತಿದ್ದಾರೆ.
ಈ ಮುಂಚೆ ಅಳವಡಿಸಿದ ಕಂಬಗಳಿಂದ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಿಲ್ಲ. ನಿಯಮಗಳ ಅನ್ವಯ ಪರಿಹಾರ ನೀಡದೆ ಕಂಬಗಳ ಅಳವಡಿಕೆಗೆ ಮುಂದಾಗಿರುವುದು ಸರಿಯಲ್ಲ, ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ, ತಾಲೂಕು ದಂಡಾಧಿಕಾರಿಗಳ ಗಮನ ಸೆಳೆಯಲು ಸುಮಾರು ಒಂದು ಸಾವಿರಕ್ಕೂ ಹೆಚ್ಚು ರೈತರೊಂದಿಗೆ ತಾಲೂಕು ಕಚೇರಿ ಮುತ್ತಿಗೆ ಹಾಕಲಾಗುತ್ತಿದೆ.
ನವೆಂಬರ್ 10ರಂದು ಬೆಳಗ್ಗೆ ನೆಲದಾಂಜನೇಯ ಸ್ವಾಮಿ ದೇವಾಲಯದಿಂದ ಮೆರವಣಿಗೆ ಹೊರಟು ತಾಲೂಕು ಕಚೇರಿ ಮುತ್ತಿಗೆ ಹಾಕಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಈ ವೇಳೆ ರೈತರಾದ ವಿಶ್ವನಾಥ್, ಮೋಹನ್ ಮೂರ್ತಿ, ಗೀತಾ ವಸಂತ್ ಗೌಡ, ಮುನಿಯಪ್ಪ, ಕೆಂಪರಾಜು ಮತ್ತಿತರರಿದ್ದರು…
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……