ದೊಡ್ಡಬಳ್ಳಾಪುರ: ಕನ್ನಡ ಭಾಷೆ ಸಂಸ್ಕೃತಿ, ಪರಂಪರೆ ಶ್ರೀಮಂತವಾಗಿದ್ದು, ಜಗತ್ತಿನಲ್ಲಿಯೇ ವಿಶಿಷ್ಟವಾಗಿದೆ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂದಿನ ಯುವಪೀಳಿಗೆ ಹೆಚ್ಚಿನ ಆಸಕ್ತಿ ವಹಿಸಬೇಕಿದ್ದು, ಆಧುನಿಕ ಸಂವಹನ ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಭಾಷೆ ಹೆಚ್ಚಾಗಿ ಬಳಕೆಯಾಗಬೇಕಿದೆ ಎಂದು ಉಪವಿಭಾಗಾಧಿಕಾರಿ ಅರುಳ್ ಕುಮಾರ್ ತಿಳಿಸಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕಚೇರಿಯಲ್ಲಿ ಆಯೋಜಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಕರ್ನಾಟಕ ಏಕೀಕರಣದ ಹಿನ್ನಲೆ ವಿವರಿಸಿದ ಅವರು, ಇಂದು ರಾಜ್ಯ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ದಿಯತ್ತ ದಾಪುಗಾಲಾಕುತ್ತಿದೆ. ಕನ್ನಡ ಸಾಹಿತ್ಯ ಕ್ಷೇತ್ರ ಶ್ರೀಮಂತವಾಗಿದ್ದು, 8 ಜ್ಞಾನ ಪೀಠ ಪ್ರಶಸ್ತಿಗಳು ಲಭಿಸಿವೆ. ಆದರೆ ಇಂದು ಇತರೆ ಭಾಷೆಗಳ ಪ್ರಭಾವದಿಂದ ಮುಖ್ಯವಾಗಿ ಆಂಗ್ಲ ಭಾಷೆಯಿಂದ ಕನ್ನಡಕ್ಕೆ ದಕ್ಕೆಯಾಗುತ್ತಿದ್ದು, ನಾವು ಕನ್ನಡ ಭಾಷೆಯ ಮಹತ್ವ ಅರಿಯಬೇಕಿದೆ. ನಾಡಿನ ಕುರಿತು ಮಕ್ಕಳಿಗೆ ಅರಿವುಂಟು ಮಾಡುವ ಸಂಕಲ್ಪ ಮಾಡಿ, ಎಷ್ಟೇ ಭಾಷೆಗಳನ್ನು ಕಲಿತರೂ ಸಹ ಕನ್ನಡಕ್ಕೆ ಆದ್ಯತೆ ನೀಡಬೇಕು. ಕನ್ನಡ ನಾಡು, ಸಂಸ್ಕೃತಿಯ ಚಿಂತನೆ ಸದಾ ಕಾಲ ಬೆಳೆಸಿಕೊಳ್ಳಬೇಕಿದೆ ಎಂದರು.
ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ ನಾಡು, ನುಡಿ ಅಭಿಮಾನ ಎಲ್ಲರಲ್ಲೂ ಮೂಡಬೇಕಿದ್ದು, ಕನ್ನಡ ಭಾಷೆಯ ಬಳಕೆ ಹೆಚ್ಚಾಗಬೇಕಿದೆ. ನಾಮಫಲಕಗಳಲ್ಲಿ ಕನ್ನಡ ಬಾಷೆಯ ಬಳಕೆಯ ಕುರಿತು ಹೆಚ್ಚಿನ ಗಮನ ಹರಿಸಬೇಕಿದ್ದು, ನ.20ರೊಳಗೆ ಎಲ್ಲಾ ವಾಣಿಜ್ಯ ಮಳಿಗೆಗಳ ನಾಮಫಲಕಗಳು ನಿಯಮಾನುಸಾರ ಕನ್ನಡದಲ್ಲಿ ಪ್ರದರ್ಶಿಸುವ ಬಗ್ಗೆ, ತಹಸೀಲ್ದಾರ್ ಹಾಗೂ ನಗರಸಭೆ ಪೌರಾಯುಕ್ತರು ಸೂಚನೆ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ಟಿ.ಎಸ್.ಶಿವರಾಜ್, ನಗರಸಭೆಯ ಅಧ್ಯಕ್ಷೆ ಎಸ್.ಸುಧಾರಾಣಿ, ಉಪಾಧ್ಯಕ್ಷೆ ಫರ್ಹಾನಾ ತಾಜ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸೋಮಶೇಖರ್, ನಗರಸಭೆ ಪೌರಾಯುಕ್ತ ರಮೇಶ್ ಎಸ್.ಸುಣಗಾರ್, ಕ್ಷೇತ್ರಶಿಕ್ಷಣಾಧಿಕಾರಿ ಆರ್.ವಿ.ಶುಭಮಂಗಳ ಸೇರಿದಂತೆ ನಗರಸಭಾ ಸದಸ್ಯರು ಹಾಗೂ ವಿವಿಧ ಕನ್ನಡ ಸಂಘಟನೆಗಳ ಮುಖಂಡರು ಹಾಜರಿದ್ದರು.
ಸಮಾರಂಭಕ್ಕೂ ಮುನ್ನ ಶುಕ್ರವಾರ ನಿಧನರಾದ ಖ್ಯಾತ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……