ದೊಡ್ಡಬಳ್ಳಾಪುರ: ಸೇತುವೆ ಕಾಮಗಾರಿಯನ್ನು ಪ್ರಾರಂಭಿಸುವಂತೆ ಒತ್ತಾಯಿಸಿ ಕೊಟ್ಟಿಗೆಮಾಚೇನಹಳ್ಳಿ, ಕುಕ್ಕಲಹಳ್ಳಿ ಹಾಗೂ ಬ್ಯಾಡರಹಳ್ಳಿ ಗ್ರಾಮಸ್ಥರು ಹೊಸಹಳ್ಳಿ ಗ್ರಾಮಪಂಚಾಯಿತಿ ಪಿಡಿಒ ನಾಗರಾಜ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಗ್ರಾಮದ ಯುವ ಮುಖಂಡ ನಾಗರಾಜ್, ಸತತ ನಾಲ್ಕು ವರ್ಷಗಳಿಂದ ಸಮರ್ಪಕ ಸೇತುವೆ ಕಾಮಗಾರಿ ನಡೆಸದ ಪರಿಣಾಮ ಪದೇ ಪದೇ ಗ್ರಾಮಗಳ ಸಂಪರ್ಕ ಕಡಿತಗೊಳ್ಳುತ್ತಿದೆ. ಇದರಿಂದಾಗಿ ಈ ವ್ಯಾಪ್ತಿಯಿಂದ ಶಾಲೆ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯುಂಟಾಗುತ್ತಿದೆ. ಸಂಸದರಾದಿಯಾಗಿ, ಶಾಸಕರು, ಆಗಿನ ಜಿಲ್ಲಾಪಂಚಾಯಿತಿ, ತಾಲೂಕು ಪಂಚಾಯತಿ ಸದಸ್ಯರು, ಅಧ್ಯಕ್ಷರು ಸ್ಥಳಕ್ಕೆ ಭೇಟಿ ನೀಡಿದರೆ ಹೊರತು ಸಮಸ್ಯೆ ಪರಿಹಾರವಾಗಿಲ್ಲ.
ಈ ವ್ಯಾಪ್ತಿಯಲ್ಲಿ ಪದೇ ತಾತ್ಕಾಲಿಕ ಸೇತುವೆ ನಿರ್ಮಿಸುತ್ತಾರೆ. ಆದರೆ ಅದು ಮಳೆಗೆ ಕೊಚ್ಚಿಹೋಗಿ ಗ್ರಾಮಗಳ ಸಂಪರ್ಕ ಕಡಿತಗೊಳ್ಳುತ್ತಿದೆ. ಕೂಡಲೇ ಅಧಿಕಾರಿಗಳು ಶಾಶ್ವತ ಸೇತುವೆ ನಿರ್ಮಾಣ ಮಾಡಿ ಈ ವ್ಯಾಪ್ತಿಯ ಜನರ ಬಹು ವರ್ಷಗಳ ಸಮಸ್ಯೆ ಬಗೆ ಹರಿಸಬೇಕೆಂದು ಒತ್ತಾಯಿಸಿದರು.
ಈ ವೇಳೆ ಜೀವನಜ್ಯೋತಿ ಫೌಂಡೇಶನ್ ಸಂಸ್ಥಾಪಕ ಹರೀಶ್, ಕನ್ನಡ ಸೇವಾ ಸಮಿತಿಯ ಸಂಸ್ಥಾಪಕರಾದ ಶಿಲ್ಪ ಆರ್.ಗೌಡ, ಕರುನಾಡ ಸೇನಾ ಸಮಿತಿಯ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ದೇವರಾಜು.ಎಚ್.ಕುರುಬರಹಳ್ಳಿ , ಸಂಗೀತಗಾರರಾದ ಶ್ರೀಧರ್, ಕೊಟ್ಟಿಗೆಮಾಚೇನಹಳ್ಳಿ ಗ್ರಾಮದ ಗ್ರಾಮಸ್ಥರಾದ ನಾರಾಯಣ.ವಿ, ನರಸರಾಜು, ಮಹೇಶ್, ಗ್ರಾಮ ಪಂಚಾಯಿತಿ ಸದಸ್ಯ ಕೆ.ಸಿ.ಮೂರ್ತಿ ಅಂಬಿಕಾ, ಮುನಿಶಾಮಯ್ಯ ಕುಕ್ಕಲಹಳ್ಳಿ ಗ್ರಾಮದ ಶಶಿ, ದೇವೇಗೌಡ, ಶ್ರೀನಿವಾಸ್ ಉಜ್ಜಿನಿ ಗ್ರಾಮದ ಗಂಗಾಧರಪ್ಪ,ಕೊಟ್ಟಿಗೆಮಾಚೇನಹಳ್ಳಿ ಗ್ರಾಮದ ಲಿಂಗರಾಜು ಮತ್ತು ತಿಮ್ಮರಾಜು ಮತ್ತಿತರರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……