ದೊಡ್ಡಬಳ್ಳಾಪುರ: ನಗರದ ಗಾಂಧಿ ನಗರದ, ಬಸ್ ನಿಲ್ದಾಣದ ಸಮೀಪವಿರುವ ಖಿಲ್ಲೇ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಆಲಯ ನವೀಕರಣ ಹಾಗೂ ರುಕ್ಮಿಣೀ ಸತ್ಯಭಾಮ ಸಮೇತ ವೇಣುಗೋಪಾಲಸ್ವಾಮಿ, ಪದ್ಮಾವತಿ ಸಮೇತ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ಜೀರ್ಣೋದ್ಧಾರ ಪುನರ್ ಪ್ರತಿಷ್ಟಾಪನಾ ಮಹೋತ್ಸವ ಶ್ರದ್ಧಾ ಭಕ್ತಿಗಳಿಂದ ನೆರವೇರಿತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಇತಿಹಾಸ ಪ್ರಸಿದ್ಧವಾದ ಖಿಲ್ಲೇ ವೇಣುಗೋಪಾಲಸ್ವಾಮಿ ದೇವಾಲಯ ಈಗ ಜೀರ್ಣೋದ್ಧಾರಗೊಂಡಿರುವುದು ಭಕ್ತಾದಿಗಳಿಗೆ ಸಂತಸ ತಂದಿದೆ. ಕೊವಿಡ್-19 ಕಾರಣದಿಂದಾಗಿ ಜೀರ್ಣೋದ್ಧಾರ ಕಾರ್ಯಕ್ರಮ ಮುಂದೂಡಲಾಗಿತ್ತು. ಈಗ ಕೊವಿಡ್-19 ತೀವ್ರತೆ ಕಡಿಮೆಯಾಗಿರುವುದು ಸಮಾಧಾನಕವಾಗಿದ್ದು, ಮುಂದೆ ಇಂತಹ ಯಾವುದೇ ಮಹಾಮಾರಿಗಳು ಜನರನ್ನು ಬಾಸದಿರಲಿ ಎಂದು ಪ್ರಾರ್ಥಿಸೋಣ ಎಂದರು.
ಪುಷ್ಪಾಂಡಜ ಆಶ್ರಮದ ದಿವ್ಯಜ್ಞಾನಾನಂದ ಸ್ವಾಮಿ ಆಶೀರ್ವಚನ ನೀಡಿ, ಆತ್ಮಶುದ್ಧಿ, ನಿಶ್ಕಲ್ಮಶ ಮನಸ್ಸು, ಭಕ್ತಿ ಭಾವನೆಗಳ ಜಾಗೃತಿ ಮೂಡಿಸುವಲ್ಲಿ ದೇವಾಲಯಗಳ ಪಾತ್ರ ಮಹತ್ವದ್ದಾಗಿದೆ. ಹಳೆಯ ದೇವಾಲಯಗಳನ್ನು ಜೀರ್ಣೋದ್ಧಾಗೊಳಿಸುವುದು ಸಹ ಉತ್ತಮ ಕಾರ್ಯವಾಗಿದ್ದು, ಧಾರ್ಮಿಕ ನೆಲೆಗಟ್ಟಿನಲ್ಲಿ ಉತ್ತಮ ಸಮಾಜ ನಿರ್ಮಾಣವಾಗಬೇಕಿದೆ ಎಂದರು.
ಎಪಿಎಂಸಿ ಅಧ್ಯಕ್ಷ ವಿಶ್ವನಾಥ ರೆಡ್ಡಿ, ಟಿಎಪಿಎಂಸಿಎಸ್ ಅಧ್ಯಕ್ಷ ಡಿ.ಸಿದ್ದರಾಮಯ್ಯ, ಖಿಲ್ಲೇ ವೇಣುಗೋಪಾಲಸ್ವಾಮಿ ದೇವಾಲಯ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಹೇಮರಾಜ್, ಕಾರ್ಯದರ್ಶಿ ಪಿ.ಸಿ.ವೆಂಕಟೇಶ್, ಸದಸ್ಯರದ ಎಸ್.ರಾಜೀವ್, ಎ.ಆರ್.ರಾಘವೇಂದ್ರ, ಸಿ.ಕೆ.ರಾಮ್ ಪ್ರಕಾಶ್, ಬೈರೇಗೌಡ,ನಂದ ಕುಮಾರ್, ಶ್ರೀಧರ ಮೂರ್ತಿ, ಮಹಾವೀರ್ ಚಂದ್ ಜೈನ್ ಮತ್ತಿತರರು ಹಾಜರಿದ್ದರು.
ಪ್ರತಿಷ್ಟಾಪನಾ ಮಹೋತ್ಸವದ ಅಂಗವಾಗಿ ನಾಗ ಪ್ರತಿಷ್ಟಾಪನೆ, ಹೋಮ, ವಿಮಾನ ಕಳಶ ಸ್ಥಾಪನೆ, ಪ್ರಾಣ ಪ್ರತಿಷ್ಟಾಪನಾ ಹೋಮ, ಪೂರ್ಣಾಹುತಿ, ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮಗಳು ನೆರವೇರಿದವು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…