ದೊಡ್ಡಬಳ್ಳಾಪುರ: ಕೋವಿಡ್ 19 ವಿರುದ್ಧದ ಲಸಿಕೆ ಅಭಿಯಾನದ ಮೂಲಕ ಜಗತ್ತಿನಲ್ಲಿಯೇ 100 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಿದ ಎರಡನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿರುವುದು ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ಫಲವೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎ.ವಿ.ನಾರಾಯಣಸ್ವಾಮಿ ತಿಳಿಸಿದರು.
ನಗರದ ಗ್ರಾಮಾಂತರ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ಈ ಐತಿಹಾಸಿಕ ಸಾಧನೆಗೆ ಲಸಿಕೆ ಸಂಶೋಧನೆ, ವಿತರಣೆ, ವೈದ್ಯಕೀಯ ಸಿಬ್ಬಂದಿಗಳು ಸೇರಿ ಅನೇಕರ ಶ್ರಮ ಅಡಗಿದೆ. ಲಸಿಕೆ ಕುರಿತು ವಿರೋಧ ಪಕ್ಷಗಳ ಅಪಪ್ರಚಾರದಿಂದ ಸಾಧನೆ ವಿಳಂಬವಾಗಿದೆ. ಆದರೂ ಅಸಾಧ್ಯವಾದ ಕೆಲಸವನ್ನು ಮೋದಿ ನೇತೃತ್ವದ ಸರ್ಕಾರ ಮಾಡಿದೆ. ಲಸಿಕೆ ತಗೆದುಕೊಳ್ಳದವರಿಗೂ ಮನವೊಲಿಕೆ ಮಾಡಿ ಲಸಿಕೆ ನೀಡಲಾಗಿದೆ.
ಈ ನಿಟ್ಟಿನಲ್ಲಿ ಜಿಲ್ಲಾ ಘಟಕದಿಂದ ಲಸಿಕೆ ನೀಡುವ ಸ್ಥಳಕ್ಕೆ ತೆರಳಿ ಲಸಿಕಾ ಕಾರ್ಯದಲ್ಲಿ ಭಾಗವಹಿಸಿದವರಿಗೆ ಸನ್ಮಾನ ಮಾಡಲು ತೀರ್ಮಾನಿಸಲಾಗಿದೆ. ಅಲ್ಲದೆ ಗ್ರಾಮಾಂತರ ಮಟ್ಟದಲ್ಲಿ ಲಸಿಕೆ ಪಡೆಯದವರ ಮನವೊಲಿಸಲು ಮನೆಮನೆಗೆ ಬಿಜೆಪಿ ಕಾರ್ಯಕರ್ತರು, ಮುಖಂಡರು ತೆರಳಲಿದ್ದಾರೆ ಎಂದರು.
ಗ್ರಾಮಾಂತರ ಜಿಲ್ಲಾ ವಕ್ತಾರರಾದ ಪುಷ್ಪಾಶಿವಶಂಕರ್ ಮಾತನಾಡಿ, 100 ಕೋಟಿ ಲಸಿಕೆ ಕಾರ್ಯ ವಿಶ್ವಕ್ಕೆ ಮಾದರಿಯಾಗಿದೆ. ಲಸಿಕೆ ಕಾರ್ಯದ ಕುರಿತು ವಿರೋಧ ಪಕ್ಷದ ಅವಹೇಳನಕಾರಿ ಹೇಳಿಕೆ ಹೊರತಾಗಿ ದೇಶದ ಜನತೆ ಮೋದಿ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ.
ಲಸಿಕೆ ವಿತರಣೆ, ಸಾರ್ವಜನಿಕರಲ್ಲಿ ಅರಿವು ಸೇರಿದಂತೆ ಅನೇಕ ಕಾರ್ಯಗಳನ್ನು ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಮಾಡಿದರೆ ಹೊರತು ವಿರೋಧ ಪಕ್ಷದವರು ಯಾವುದೇ ಕ್ರಮಕೈಗೊಳ್ಳಲಿಲ್ಲ. ಕರೊನಾ ಸೋಂಕು ಪಕ್ಷ ನೋಡಿ ಬರುವುದಿಲ್ಲ. ಆದರೆ ವಿರೋಧ ಪಕ್ಷಗಳು ಅವಹೇಳನ ಮಾಡಿದರೆ ಹೊರತು ಲಸಿಕೆ ಪಡೆಯುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸಕ್ಕೆ ಮುಂದಾಗಲಿಲ್ಲ.
ಆರೋಗ್ಯ ಇಲಾಖೆಯ ವರದಿಯನ್ವಯ ಅಕ್ಟೋಬರ್ 21 ರ ಬೆಳಗ್ಗೆ 10 ಗಂಟೆ ವೇಳೆಗೆ ದೇಶದ 100 ಕೋಟಿ 15,714 ಜನರಿಗೆ ಲಸಿಕೆ ನೀಡಲಾಗಿತ್ತು. ಈ ಪೈಕಿ 70.83 ಕೋಟಿ ಜನರಿಗೆ ಮೊದಲನೇ ಡೋಸ್ ಲಸಿಕೆ ನೀಡಿದ್ದರೆ, 28.17 ಕೋಟಿ ಜನರಿಗೆ ಎರಡೂ ಡೋಸ್ ಲಸಿಕೆ ಕೊಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವ ದೂರದೃಷ್ಟಿಯ ಫಲವಾಗಿ 100 ಕೋಟಿ ಲಸಿಕೆ ನೀಡಿದ ಮೈಲಿಗಲ್ಲು ಸ್ಥಾಪಿಸಿದೆ. ಅಲ್ಲದೆ ಲಸಿಕೆ ಕಾರ್ಯದ ಪ್ರಗತಿಗೆ ಕರ್ನಾಟಕ ರಾಜ್ಯ ಸರ್ಕಾರ ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬೆಂ.ಗ್ರಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಗೋಪಿ, ಜಿಲ್ಲಾ ಫಲಾನುಭವಿ ಪ್ರಕೋಷ್ಟದ ಸಂಚಾಲಕ ಧೀರಜ್ ಮುನಿರಾಜ್, ಜಿಲ್ಲಾ ಕಾರ್ಯದರ್ಶಿ ರಾಮಕೃಷ್ಣ, ತಾಲೂಕು ಪ್ರಧಾನ ಕಾರ್ಯದರ್ಶಿ ಕಾಂತರಾಜು, ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿ ವತ್ಸಲ, ನಗರಸಭೆ ಮಾಜಿ ಅಧ್ಯಕ್ಷ ಮುದ್ದಪ್ಪ, ಕಾರ್ಯಾಲಯ ಕಾರ್ಯದರ್ಶಿ ಮಂಜುನಾಥ್ ಮತ್ತಿತರರಿದ್ದರು.
ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ………