ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಆಯುಧಪೂಜೆ – ವಿಜಯದಶಮಿ ಹಬ್ಬಕ್ಕೆ ಸಿದ್ದತೆಗಳು ನಡೆದಿದ್ದು, ಬೂದುಕುಂಬಳ ಹೊರತಾಗಿ, ಹೂ ಹಣ್ಣು, ಬಾಳೆಕಂದು, ಸೇರಿದಂತೆ ಮಿಕ್ಕೆಲ್ಲಾ ಅಗತ್ಯ ವಸ್ತುಗಳ ಬೆಲೆಗಳು ಏರಿಕೆಯ ನಡುವೆಯೂ ಹಬ್ಬಕ್ಕೆ ಸ್ವಾಗತ ನಡೆದಿದೆ.
ನಗರದ ಮಾರುಕಟ್ಟೆ ಪ್ರದೇಶದಲ್ಲಿ ಅಂಗಡಿಗಳು ಹಬ್ಬಕ್ಕೆಂದೇ ತೆರೆದಿವೆ. ಬೂದು ಕುಂಬಳಕಾಯಿ ಕೆಜಿಗೆ 10ರಿಂದ 15ರೂ ಇದೆ. ಆದರೆ ಹೂವಿನ ಬೆಲೆಗಳು ಗಗನಕ್ಕೇರಿವೆ. ಕಾಕಡ, ಮಳ್ಳೆ ಹೂವಿನ ಬೆಲೆ ಕೆ.ಜಿಗೆ 400 ರಿಂದ 500 ರೂಗಳ ವರೆಗಿದ್ದರೆ ಕನಕಾಂಬರ 1200ರೂ, ಶಾಮಂತಿಗೆ, ಬಟನ್ಸ್ , ಗುಲಾಬಿ ಮೊದಲಾದ ಹೂವಿನ ಬೆಲೆಗಳು ಕೆ.ಜಿಗೆ 150 ದಾಟಿವೆ. ಬಾಳೆ ಹಣ್ಣು ಕೆಜಿಗೆ 20 ರಿಂದ 60ರೂ, ಸೇರಿದಂತೆ ಇತರೆ ಹಣ್ಣುಗಳ ಬೆಲೆಗಳೂ ಕೆಜಿಗೆ 20 ರಿಂದ 30 ಹೆಚ್ಚಾಗಿವೆ. ಬಾಳೆಕಂದುಗಳ ಬೆಲೆ ಸಹ ಹೆಚ್ಚಾಗಿದೆ.
ಆಯುಧ ಪೂಜೆಗಾಗಿ ಮಗ್ಗಗಳು ಯಂತ್ರಗಳು, ವಾಹನಗಳು ಮೊದಲಾದವುಗಳನ್ನು ಶುದ್ದ ಮಾಡಿ ಪೂಜೆಗೆ ಅಣಿ ಮಾಡಿಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
ಕಳೆದ ಒಂದು ವಾರದಿಂದ ತಾಲೂಕಿನಲ್ಲಿ ಮಳೆ ಬೀಳುತ್ತಿದ್ದು, ಹೂವುಗಳ ಮೇಲೆ ತೇವಾಂಶ ಹೆಚ್ಚಾಗಿ ಸಹಜವಾಗಿ ಬೆಲೆಗಳು ಹೆಚ್ಚಾಗಿವೆ. ಮಳೆಯಲ್ಲಿ ತೊಯ್ದಿರುವ ಹೂಗಳ ಬೆಲೆ ಕಡಿಮೆಯಿದ್ದರೆ, ತಾಜಾ ಹೂವುಗಳ ಬೆಲೆಗಳು ಹೆಚ್ಚಾಗಿವೆ.
ಬೆಲೆ ಏರಿಕೆ ನೋಡಿದರೆ ಹಬ್ಬ ಮಾಡಲು ಉತ್ಸಾಹವೇ ಇಲ್ಲದಿದ್ದರೂ ಹಿಂದಿನಿಂದಲೂ ಆಚರಿಸುತ್ತಿರುವ ಹಬ್ಬಗಳನ್ನು ಆಚರಿಸಲೇಬೇಕಲ್ಲ ಎನ್ನುತ್ತಾರೆ ಬಹುಪಾಲು ಸಾರ್ವಜನಿಕರು.
ಸರ್ಕಾರಿ ಕಚೇರಿಗಳಲ್ಲಿ ಆಯುಧ ಪೂಜೆ :ತಾಲೂಕು ಕಚೇರಿ, ಉಪವಿಭಾಗಾಕಾರಿಗಳ ಕಚೇರಿ, ಸಿಡಿಪಿಓ ಕಚೇರಿ ಮೊದಲಾಗಿ ಸರ್ಕಾರಿ ಕಚೇರಿಗಳಲ್ಲಿ ಬುಧವಾರವೇ ಆಯುಧ ಪೂಜಾ ಕಾರ್ಯಕ್ರಮಗಳು ನಡೆದವು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……