ಬೆಂ.ಗ್ರಾ.ಜಿಲ್ಲೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ನಡೆ, ಹಳ್ಳಿಗಳ ಕಡೆ ಕಾರ್ಯಕ್ರಮ ಅಕ್ಟೋಬರ್ 16ರಂದು ನಡೆಯಲಿದ್ದು, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ನೆಲಮಂಗಲ ತಾಲ್ಲೂಕಿನ ಸೋಂಪುರ ಹೋಬಳಿಯ ಮರಳುಕುಂಟೆ ಗ್ರಾಮಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಅಲ್ಲಿನ ಸಮಸ್ಯೆಗಳನ್ನು ಆಲಿಸುವ ಜೊತೆಯಲ್ಲಿ ಅರ್ಹರಿಗೆ ಸವಲತ್ತುಗಳನ್ನು ವಿತರಣೆ ಮಾಡಲಿದ್ದಾರೆ ಹಾಗೂ ಗ್ರಾಮದಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.
ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅಕ್ಟೋಬರ್ 16 ರಂದು ಬೆಳಿಗ್ಗೆ 11.00 ಗಂಟೆಗೆ ಮರಳುಕುಂಟೆ ಗ್ರಾಮಕ್ಕೆ ಆಗಮಿಸಿ, ಮರಳುಕುಂಟೆ ಗ್ರಾಮದ ಗ್ರಾಮದೇವತೆ ಮಾರಮ್ಮ ದೇವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, 11.30 ಗಂಟೆಗೆ ಹರಿಜನ ಕಾಲೋನಿಗೆ ಭೇಟಿ ನೀಡಿ, ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ ಹಾಗೂ ಮಳೆಯಿಂದ ಬಿದ್ದ ಮನೆಯ ಮಾಲಿಕರಿಗೆ ಪರಿಹಾರ ವಿತರಣೆ ಮಾಡಲಿದ್ದಾರೆ.
ನಂತರ ಮಧ್ಯಾಹ್ನ 12.30 ಗಂಟೆಗೆ ಮರಳುಕುಂಟೆ ಗ್ರಾಮದ ವಿಶೇಷ ವಿಕಲಚೇತನರಿಗೆ ಆದೇಶದ ಪ್ರತಿ ವಿತರಣೆ, ಶ್ರವಣ ಸಾಧನ, ಊರುಗೋಲು ಹಾಗೂ ವಿವಿಧ ಸಲಕರಣೆಗಳನ್ನು ವಿತರಿಸಲಿದ್ದಾರೆ. ಮಧ್ಯಾಹ್ನ 1.30 ಗಂಟೆಗೆ ಮರಳುಕುಂಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಊಟವನ್ನು ಸೇವಿಸಲಿದ್ದಾರೆ.
ತದನಂತರ ಮಧ್ಯಾಹ್ನ 3.00 ಗಂಟೆಗೆ ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಮರಳುಕುಂಟೆ ಗ್ರಾಮದ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಣೆ ಮಾಡುವ ಕಾರ್ಯಕ್ರಮ ನಡೆಯಲಿದೆ.
ಸಂಜೆ 5.00 ಗಂಟೆಗೆ ಗ್ರಾಮ ವೀಕ್ಷಣೆಗೆ ತೆರಳಲಿದ್ದು, ರಾತ್ರಿ 7.30 ಗಂಟೆಗೆ ಮರಳುಕುಂಟೆ ಗ್ರಾಮದಲ್ಲಿ ವಾಸ್ತವ್ಯ ಹೂಡಲಿದ್ದಾರೆ ಹಾಗೂ ಅಕ್ಟೋಬರ್ 17ರ ಬೆಳಿಗ್ಗೆ 8.00 ಗಂಟೆಗೆ ಮರಳುಕುಂಟೆ ಗ್ರಾಮದ ಹರಿಜನ ಕಾಲೋನಿಗೆ ಭೇಟಿ ನೀಡಿ, ಉಪಹಾರ ಸೇವಿಸಿ, ನಂತರ ಕೇಂದ್ರಸ್ಥಾನಕ್ಕೆ ಪ್ರಯಾಣಿಸಲಿದ್ದಾರೆ.
ಅದರಂತೆಯೇ ಅಕ್ಟೋಬರ್ 16 ರಂದು ದೇವನಹಳ್ಳಿ ತಾಲ್ಲೂಕಿನಲ್ಲಿ ತಹಶೀಲ್ದಾರ್ ಅನಿಲ್ ಕುಮಾರ್ ಅರೋಲಿಕರ್ ಅವರು ಕುಂದಾಣ ಹೋಬಳಿಯ ಜಾಲಿಗೆ ಗ್ರಾಮದಲ್ಲಿ, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ತಹಶೀಲ್ದಾರ್ ಟಿ.ಎಸ್.ಶಿವರಾಜ್ ಅವರು ಮಧುರೆ ಹೋಬಳಿಯ ಉದ್ದೀಚಿಕ್ಕನಹಳ್ಳಿ ಗ್ರಾಮದಲ್ಲಿ ಹಾಗೂ ಹೊಸಕೋಟೆ ತಾಲ್ಲೂಕಿನಲ್ಲಿ ತಹಶೀಲ್ದಾರ್ ಗೀತಾ ಅವರು ಸೂಲಿಬೆಲೆ ಹೋಬಳಿಯ ಅತ್ತಿಬೆಲೆ ಗ್ರಾಮದಲ್ಲಿ ಆಯಾ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಸಮಸ್ಯೆಗಳನ್ನು ಆಲಿಸುವ ಜೊತೆಯಲ್ಲಿ ಸವಲತ್ತುಗಳನ್ನು ವಿತರಣೆ ಮಾಡಿ, ಗ್ರಾಮದಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯವರ ಕಚೇರಿ ಪ್ರಕಟಣೆ ತಿಳಿಸಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…