ಓದುಗ ಮಿತ್ರರು ವರ್ಷದಿಂದ ಹರಿತಲೇಖನಿಯನ್ನು ಪ್ರೋತ್ಸಾಹಿಸಿ ಬೆಳೆಸುತ್ತಿದ್ದಿರಿ. ಅದಕ್ಕೆ ಹೃದಯ ಪೂರ್ವಕ ನಮನಗಳು. ಈಗ ಹೊಸದೊಂದು ಮುನ್ನುಡಿಗೆ ಅಣಿಯಾಗುತ್ತಿದ್ದೇವೆ. ಅದುವೇ ದಿನದ ಭವಿಷ್ಯ.
ಹರಿತಲೇಖನಿಯ ವೇಗಕ್ಕೆ ಇದು ಮತ್ತೊಂದು ಗರಿ. ರಾಶಿ ಭವಿಷ್ಯವನ್ನು ಇಂದಿಗೂ ಸಂಪ್ರದಾಯ ಬದ್ಧವಾಗಿ ನಂಬುವುದು ವಾಡಿಕೆ. ಇದಕ್ಕೆ ಪೂರಕವಾಗಿ ಹರಿತಲೇಖನಿ ತಂಡ ದಿನದ ಭವಿಷ್ಯ ನೀಡಲು ಮುಂದಾಗಿದೆ.
ಹರಿತಲೇಖನಿಯಲ್ಲಿ ಸೋಮವಾರದಿಂದ ಪ್ರತಿ ದಿನ ಪ್ರಕಟವಾಗಲಿರುವ ದಿನದ ಭವಿಷ್ಯವನ್ನು ವಿದ್ವಾನ್ ಎಸ್.ನವೀನ್ ಅವರು ನೀಡಲಿದ್ದಾರೆ.
ವಿದ್ವಾನರ ಪರಿಚಯ: ವಿದ್ವಾನ್ ಎಸ್.ನವೀನ್ ರವರು ದೊಡ್ಡಬಳ್ಳಾಪುರ ನಿವಾಸಿಯಾದ ಡಾ. ಜಿ.ಶ್ರೀನಿವಾಸ ರಾಘವನ್ ಮತ್ತು ಆರ್. ರುಕ್ಮಿಣಿ ರವರ ದ್ವಿತೀಯ ಪುತ್ರರು. ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರಸಿದ್ಧ ಕಲಾವಿದರಾದ ಹಾಗೂ ಹಿಂದಿ ಪಂಡಿತರಾದ ದಿ.A. N. K. ಗೋಪಾಲ ಭಟ್ಟರ್ ರವರ ಮೊಮ್ಮಗರಾದ ಇವರು, ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ನಗರದ ಪ್ರಸಿದ್ಧ ಖಾಸಗಿ ಶಾಲೆಯಲ್ಲಿ ಪೂರ್ಣಗೊಳಿಸಿರುತ್ತಾರೆ.
ಪದವಿ ಪೂರ್ವ ಶಿಕ್ಷಣವನ್ನು ಆರ್. ಎಲ್.ಜಾಲಪ್ಪ ಪಿ.ಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿರುತ್ತಾರೆ. ಧಾರ್ಮಿಕ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ಇದ್ದ ಕಾರಣ ಉನ್ನತ ಶಿಕ್ಷಣಕ್ಕಾಗಿ ಶ್ರೀ ಕ್ಷೇತ್ರ ಆದಿಚುಂಚನಗಿರಿಯ ಶ್ರೀ ಕಾಲಭೈರವೇಶ್ವರ ಸಂಸ್ಕೃತ, ವೇದ, ಆಗಮ ಮಹಾವಿದ್ಯಾಲಯದಲ್ಲಿ ಸೇರಿ ಸಂಸ್ಕೃತ ಪದವಿಯನ್ನು, ಜ್ಯೋತಿಷ್ಯದ ಅಡ್ವಾನ್ಸ್ ಡಿಪ್ಲೋಮ ಇನ್ Astrology ಯನ್ನು ಸಹ ಪಡೆದಿರುತ್ತಾರೆ. ಅಲ್ಲದೆ ಹಿಂದಿ ವಿದ್ವತ್ ಪಡೆದಿದ್ದು ಶ್ರೀಪಾಂಚರಾತ್ರಾಗಮ ಪ್ರವೀಣರಾಗಿರುತ್ತಾರೆ.
ಕರ್ನಾಟಕ ಸರ್ಕಾರ ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ನಡೆಯುವ ಸರ್ವಾಗಮ ಪ್ರವರ / ಪ್ರವೀಣ ಆಗಮ ಪ್ರಸಿದ್ಧ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಆಗಮ ವಾಚ ಪರೀಕ್ಷಕರಾಗಿ ಕಾರ್ಯ ನಿರ್ವಹಿಸಿರುತ್ತಾರೆ. ಪ್ರಸ್ತುತ ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ತಿನ ದೊಡ್ಡಬಳ್ಳಾಪುರ ತಾಲ್ಲೂಕು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದು, ತಾಲ್ಲೂಕಿನ ವಿಪ್ರ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಧಾರ್ಮಿಕ ಕ್ಷೇತ್ರವಷ್ಟೇ ಅಲ್ಲದೆ ತಂತ್ರಜ್ಞಾನದಲ್ಲೂ ಮೂಲ ಗಣಕಯಂತ್ರ ಅಧ್ಯಯನ ಮಾಡಿರುತ್ತಾರೆ. ಸ್ನಾತಕೋತ್ತರ ಪದವಿಯನ್ನು ಹೊಂದ್ದಿದರು ಸಹ ಅವರ ವಂಶ ಪಾರಂಪರ್ಯವಾದ ಅರ್ಚನಾವೃತ್ತಿಯನ್ನು ಬಿಡದೆ, ಪೌರೋಹಿತ್ಯವನ್ನು ನಿರ್ವಹಿಸುತ್ತಿದ್ದಾರೆ.
ವಿದ್ವಾನ್ ನವೀನ್ ರವರು ಒಂಟಿಕೊಪ್ಪಲ್ ಪಂಚಾಂಗದ ಅಡಿಯಲ್ಲಿ ಖಚಿತವಾದ ದಿನ ಭವಿಷ್ಯ ನೀಡುವ ವಿಶ್ವಾಸವಿದ್ದು, ಓದುಗರು ಈ ಹಿಂದಿನ ಲೇಖನ, ಬರಹ, ವರದಿಗಳಿಗೆ ನೀಡಿದ ಪ್ರೋತ್ಸಾಹವನ್ನು ದಿನದ ಭವಿಷ್ಯಕ್ಕೂ ನೀಡುತ್ತಿರಿ ಎಂಬ ನಂಬಿಕೆ ನಮ್ಮದು – ಸಂಪಾದಕ.