ಕೋಲಾರ: ರಾಜ್ಯದಲ್ಲಿ ಅತೀ ಹೆಚ್ಚು ನೀರನ್ನು ಅಂದರೆ 8 ಟಿ.ಎಂ.ಸಿ ನೀರನ್ನು ಜಿಲ್ಲೆಗೆ ಕೆ.ಸಿ.ವ್ಯಾಲಿ ಮೂಲಕ ಹರಿಸಲಾಗಿದೆ. ಜಿಲ್ಲೆಯ ರೈತರು ಎತ್ತಿನಹೊಳೆ ಯೋಜನೆಗೆ ಅಗತ್ಯವಾದ ಭೂಮಿಯನ್ನು ಬಿಟ್ಟು ಕೊಟ್ಟರೆ ಶೀಘ್ರದಲ್ಲಿ ಎತ್ತಿನಹೊಳೆ ನೀರನ್ನು ಜಿಲ್ಲೆಗೆ ಹರಿಸಲಾಗುವುದು ಎಂದು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ.ಮಧುಸ್ವಾಮಿ ತಿಳಿಸಿದರು.
ಇಂದು ಮುಳಬಾಗಿಲು ತಾಲ್ಲೂಕಿನ ಜಮ್ಮನಹಳ್ಳಿ ಗ್ರಾಮದಲ್ಲಿ ಜಿಲ್ಲಾಡಳಿತ ಹಾಗೂ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ. ಮುಳಬಾಗಿಲು ತಾಲ್ಲೂಕಿನ, ಹೊಳಲಿ ಕೆರೆ ಪಂಪ್‍ಹೌಸ್‍ನಿಂದ ನೀರನ್ನು ಎತ್ತುವಳಿ ಮಾಡಿ 32 ಕೆರೆಗಳನ್ನು ತುಂಬಿಸುವ ಕಾಮಗಾರಿ ಮತ್ತು ಕೆ.ಸಿ.ವ್ಯಾಲಿ ಯೋಜನೆಯ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
2ನೇ ಹಂತದ ಕೆ.ಸಿ.ವ್ಯಾಲಿ ಯೋಜನೆಯನ್ನು ಶೀಘ್ರದಲ್ಲಿ ಪ್ರಾರಂಭಿಸಿ ಜಿಲ್ಲೆಯ ಇತರೆ ಕೆರೆಗಳನ್ನು ತುಂಬಿಸಲಾಗುವುದು. ರೈತರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು. ಶಕ್ತಿ ಇಲ್ಲದವರಿಗೆ ಶಕ್ತಿ ತುಂಬಬೇಕಾದರೆ ಉಳಿದ ಕೆರೆಗಳಿಗೆ ನೀರು ತುಂಬಿಸಬೇಕು. ಕೆ.ಸಿ.ವ್ಯಾಲಿ ನೀರಿಂದ ಯಾವುದೇ ರೀತಿಯ ತೊಂದರೆಯಿಲ್ಲ. ಎಲ್ಲಾ ವಿಧದ ಪರೀಕ್ಷೆಗಳನ್ನು ನಡೆಸಿ ಸಂಸ್ಕರಿಸಿ ನೀರನ್ನು ಕೆರೆಗಳಿಗೆ ತುಂಬಿಸಲಾಗುತ್ತಿದೆ. ಈ ನೀರನ್ನು ಕುಡಿಯಬಾರದು. ನೀರನ್ನು ಭೂಮಿಯಲ್ಲಿ ಹಿಂಗಿಸಿ ನಂತರ ಬೋರ್ ವೆಲ್ ಮೂಲಕ ಹೊರತೆಗೆದು ಬಳಸಬೇಕು. ಕೆರೆಗಳಿಗೆ ಚರಂಡಿ ನೀರನ್ನು ಹರಿಸದೆ ಇಂಗುಗುಂಡಿಗಳ ಮೂಲಕ ಇಂಗಿಸಬೇಕು ಎಂದು ಅವರು ತಿಳಿಸಿದರು.
ಜಿಲ್ಲೆಯ ರೈತರು ಹೆಚ್ಚು ಶ್ರಮಜೀವಿಗಳು. ಹಾಲು, ತರಕಾರಿ ಹಾಗೂ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ಅವರಿಗೆ ಶಕ್ತಿ ತುಂಬುವ ಕೆಲಸ ಸರ್ಕಾರ ಮಾಡಿದರೆ ದೇಶದಲ್ಲಿ ಮೊದಲನೇ ಸ್ಥಾನಕ್ಕೆ ಬರುತ್ತಾರೆ. ಜಿಲ್ಲೆಯಲ್ಲಿ ಹೆಚ್ಚು ಎಫ್.ಇ.ಒ ಗಳು ಮತ್ತು ಕೋಲ್ಡ್ ಸ್ಟೋರೇಜ್ಗಳನ್ನು ಸ್ಥಾಪಿಸಿದರೆ ರೈತರು ಬೆಳೆದ ತರಕಾರಿ ಹಣ್ಣುಗಳನ್ನು ದಾಸ್ತಾನು ಮಾಡಿ ರಫ್ತು ಮಾಡಬಹುದು. ಇದರಿಂದ ರೈತರ ಆದಾಯ ದ್ವಿಗುಣವಾಗಿ ಅವರ ಜೀವನ ಅಭಿವೃದ್ಧಿ ಹೊಂದುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಯೋಜನೆಗಳ ಪ್ರಯೋಜನೆಗಳನ್ನು ರೈತರು ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಅಂಬೇಡ್ಕರ್ ಅಭಿವೃದ್ದಿ ನಿಗಮದ ಅಧ್ಯಕ್ಷ ಹೆಚ್.ನಾಗೇಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲೆಯ ಪ್ರತಿಯೊಂದು ಕೆರೆಯು ವರ್ಷದ 360 ದಿನಗಳು ತುಂಬಿರಬೇಕು. ಅಂತರ್ಜಲ ವೃದ್ಧಿಸಿ ಜಿಲ್ಲೆಯು ಸದಾ ಹಸಿರುಮಯವಾಗಿರಬೇಕು. ಜಿಲ್ಲೆಯಲ್ಲಿ ಕೆ.ಸಿ.ವ್ಯಾಲಿ ನೀರಿನಿಂದ 121 ಕೆರೆಗಳು ಹಾಗೂ 100 ಚೆಕ್ ಡ್ಯಾಮ್‍ಗಳು ತುಂಬಿದೆ. ಮಳೆಯು ಚೆನ್ನಾಗಿ ಆಗುತ್ತಿರುವುದರಿಂದ ಮತ್ತು ಕೆಸಿ ವ್ಯಾಲಿ ನೀರಿನಿಂದ ಜಿಲ್ಲೆಯ ರೈತರಿಗೆ ತುಂಬಾ ಅನುಕೂಲವಾಗಿದೆ ಎರಡನೇ ಹಂತದಲ್ಲಿ 277 ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ ಎಂದು ತಿಳಿಸಿದರು.
ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್.ಮುನಿಸ್ವಾಮಿ ಅವರು ಮಾತನಾಡಿ. ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಕೆ.ಸಿ.ವ್ಯಾಲಿ ಮತ್ತು ಮಳೆಯಿಂದ ಸುಮಾರು ಕೆರೆಗಳು ತುಂಬಿವೆ. ಜಿಲ್ಲೆಯಲ್ಲಿ 2,500 ಕೆರೆಗಳಿವೆ ಕೆ.ಸಿ.ವ್ಯಾಲಿ ಯೋಜನೆಯ 2ನೇ ಹಂತದಲ್ಲಿ ಜಿಲ್ಲೆಯ 277 ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಇಡೀ ಏಷ್ಯಾದಲ್ಲಿ ದೊಡ್ಡದಾದ ಟೊಮ್ಯಾಟೋ ಮತ್ತು ಮಾವಿನ ಹಣ್ಣಿನ ಮಾರುಕಟ್ಟೆಗಳು ಜಿಲ್ಲೆಯಲ್ಲಿವೆ. ಕೆ.ಸಿ.ವ್ಯಾಲಿ ನೀರನ್ನು 400ಎಂ.ಎಲ್.ಡಿ ಗಿಂತ ಹೆಚ್ಚಾಗಿ ಜಿಲ್ಲೆಯ ಕೆರೆಗಳಿಗೆ ಹರಿಸಿ ಹಾಗೂ ಮೇಕೆ ದಾಟು ಯೋಜನೆಯನ್ನು ಪ್ರಾಂಭಿಸಿದರೆ ಬಂಗಾರಪೇಟೆ ಮತ್ತು ಮಾಲೂರು ಜನರಿಗೆ ಕುಡಿಯುವ ನೀರಿಗೆ ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು.
ವಿಧಾನ ಪರಿಷತ್ ಶಾಸಕ ಡಾ.ವೈ.ಎ.ನಾರಾಯಣಸ್ವಾಮಿ ಅವರು ಮಾತನಾಡಿ, ಜಿಲ್ಲೆಯಲ್ಲಿ ರೈತರು ಸುಮಾರು ಸಾವಿರ ಅಡಿಗಳಿಂದ ನೀರು ತಂದು ತರಕಾರಿ, ಹಣ್ಣುಗಳನ್ನು ಬೆಳೆದು ವಿವಿಧ ಜಿಲ್ಲೆಗಳಿಗೆ ರಫ್ತು ಮಾಡುತ್ತಿದ್ದಾರೆ. ಜಿಲ್ಲೆಯ ಜನತೆಗೆ ಅನುಕೂಲವಾಗುವಂತೆ ಯರಗೊಳ್ ಡ್ಯಾಮ್, 2ನೇ ಹಂತದ ಕೆ.ಸಿ.ವ್ಯಾಲಿ ಯೋಜನೆ ಮತ್ತು ಎತ್ತಿನಹೊಳೆ ಯೋಜನೆಗಳ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಿ ಎಂದು ಸಚಿವರಲ್ಲಿ ಮನವಿ ಮಾಡಿದರು.
ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಶ್ರೀನಿವಾಸಗೌಡ ಅವರು ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 21 ವರ್ಷಗಳಿಂದ ಕೆರೆಗಳು ತುಂಬಿರಲಿಲ್ಲ ಆದರೆ ಈಗ ಕೆ.ಸಿ ವ್ಯಾಲಿ ನೀರಿನಿಂದ ಎಲ್ಲಾ ಕೆರೆಗಳು ತುಂಬುತ್ತಿವೆ. ಕೆರೆಗಳು ತುಂಬಿರುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗುತ್ತಿದ್ದು ರೈತರಿಗೆ ವ್ಯವಸಾಯ ಮಾಡಲು ತುಂಬಾ ಅನುಕೂಲವಾಗಿದೆ ಎಂದು ತಿಳಿಸಿದರು.
ಸಚಿವರು ಮುಳಬಾಗಿಲು ತಾಲ್ಲೂಕಿನ, ಹೊಳಲಿ ಕೆರೆ ಪಂಪ್‍ಹೌಸ್‍ನಿಂದ ನೀರನ್ನು ಎತ್ತುವಳಿ ಮಾಡಿ 32 ಕೆರೆಗಳನ್ನು ತುಂಬಿಸುವ ಕಾಮಗಾರಿಗೆ ಚಾಲನೆ ಮತ್ತು ಜಮ್ಮನಹಳ್ಳಿ ಕೆರೆಗೆ ಬಾಗಿನ ಅರ್ಪಿಸಿದರು.
ಈ ಕಾರ್ಯಕ್ರಮದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಮೃತ್ಯುಂಜಯಸ್ವಾಮಿ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಎನ್.ಎಂ.ನಾಗರಾಜ್, ಅಪರ ಜಿಲ್ಲಾಧಿಕಾರಿ ಡಾ.ಸ್ನೇಹಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಓಂಶಕ್ತಿ ಚಲಪತಿ ಅವರು ಸೇರಿದಂತೆ ಮತ್ತಿತರರು ಉಪಸ್ಥಿತರಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……..