ಮೈಸೂರು: ನಾಡದೇವತೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ವಿಶ್ವವಿಖ್ಯಾತ ಮೈಸೂರು ದಸಾರಾಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಚಾಲನೆ ನೀಡಿದರು. ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಿ, ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಯಾವ ಜನ್ಮದ ಪುಣ್ಯವೋ ಗೊತ್ತಿಲ್ಲ ನನಗೆ ಅವಕಾಶ ಸಿಕ್ಕಿದೆ. ಮೈಸೂರು ದಸರಾ ಉದ್ಘಾಟನೆ ಮಾಡುವ ಅವಕಾಶ ಸಿಕ್ಕಿದೆ. ಈ ಅವಕಾಶ ಮಾಡಿಕೊಟ್ಟ ಸಿಎಂಗೆ ನನ್ನ ಅನಂತ ಧನ್ಯವಾದ. ನನ್ನ ವಿದ್ಯಾಭ್ಯಾಸದ ದಿನಗಳಲ್ಲಿ ಪ್ರತಿನಿತ್ಯ ತಾಯಿಗೆ ನಮಿಸುತ್ತಿದ್ದೆ. ಶಾಲೆಗೆ ಹೋಗುವುದಕ್ಕೂ ಮುನ್ನ ದೇವಿಗೆ ನಮಿಸುತ್ತಿದ್ದೆ. ಮೈಸೂರು ದಸರಾಗೆ ವಿದೇಶಗಳಿಂದಲೂ ಜನ ಬರುತ್ತಿದ್ದರು. ದಸರಾ ವೇಳೆ ಹಲವು ಸಾಂಸ್ಕೃತಿಕ ಕಾರ್ಯಕ್ರಮ ನಡಿಯುತಿತ್ತು ಎಂದು ಇದೇ ವೇಳೆ ಎಸ್.ಎಂ.ಕೃಷ್ಣ ಅವರು, ತಮ್ಮ ಬಾಲ್ಯದ ದಿನದಲ್ಲಿ ನಡೆಯುತ್ತಿದ್ದ ದಸರಾ ಬಗ್ಗೆ ಸ್ಮರಿಸಿದರು.
ಹನ್ನೆರಡು ವರ್ಷ ಇದ್ದಾಗಲೇ ನಮ್ಮ ತಂದೆ ಓದಲು ಕಳುಹಿಸಿಕೊಟ್ಟರು. ಒಂಟಿಕೊಪ್ಪಲು ಶಾಲೆಯಲ್ಲಿ ಓದಿ, ಮಹಾಜನ ಶಾಲೆಯಲ್ಲಿ ಕಲಿತೆ. ನಂತರ ಯುವರಾಜ ಕಾಲೇಜು, ಮಹಾರಾಜ ಕಾಲೇಜಿನಲ್ಲಿ ಕಲಿತೆ. ನಾನು ಮೈಸೂರಿನ ಜೊತೆಯಲ್ಲೇ ಬೆಳೆದೆ. ಪ್ರತಿದಿನ ಚಾಮುಂಡಿ ಬೆಟ್ಟ ನೋಡುತ್ತಿದ್ದೆ, ಕೈ ಮುಗಿಯುತ್ತಿದೆ. ದಸರಾ ಆ ವೇಳೆ ಸಂಭ್ರಮದಿಂದ ನಡೆಯುತ್ತಿತ್ತು. ರಾಜ್ಯದ ನಾನಾ ಕಡೆ ಹಾಗೂ ವಿದೇಶದಿಂದ ಬರುತ್ತಿದ್ದರು.
ಪ್ರಜಾಪ್ರತಿನಿಧಿ ಜಗನ್ಮೋಹನ ಅರಮನೆಯಲ್ಲಿ ನಡೆಯುತ್ತಿತ್ತು. ಪೀಟಿಲ್ ಚೌಡಯ್ಯ, ದೇವೇಂದ್ರಪ್ಪ ಹಲವರು ಪ್ರಾತಃಸ್ಮರಣೀಯರು ಇದ್ದರು. ಮೈಸೂರು ಕುಸ್ತಿಗೆ ಹೆಸರಾಂತ ಜಿಲ್ಲೆ. ಸಾಹುಕಾರ್ ಚನ್ನಯ್ಯ ಅವರು ಕುಸ್ತಿಗೆ ಸಹಮತ ಹೆಚ್ಚಾಗಿತ್ತು. ಯದುವಂಶದವರು ದಸರಾ ಉತ್ಸವಕ್ಕೆ ಮೆರಗು ತಂದಿದ್ದಾರೆ. ನಾಲ್ವಡಿ ಒಡೆಯರ್, ಜಯಚಾಮರಾಜ ಒಡೆಯರ್ ಕೊಡುಗೆ ಅಪಾರವಾಗಿದೆ. ವಿಶ್ವೇಶ್ವರಯ್ಯ, ಸರ್ ಮಿರ್ಜಾ ಇಸ್ಮಾಯಿಲ್ ಅವರ ಕೊಡುಗೆ ಇದೆ ಅಂತ ಎಸ್ಎಂ ಕೃಷ್ಣ ಭಾಷಣದಲ್ಲಿ ಬಾಲ್ಯದ ದಿನ ಸೇರಿದಂತೆ ಮೈಸೂರಿನ ಪ್ರಮುಖರನ್ನ ನೆನೆದರು.
ದಸರಾ ಪ್ಯಾಕೇಜ್ ಟೂರ್ ಮಾಡಿ: ಬೊಮ್ಮಾಯಿಗೆ ಸಲಹೆ: ಭಾಷಣದಲ್ಲಿ ಪ್ಯಾಕೇಜ್ ಟೂರಿಸಂಗೆ ಎಸ್ಎಂ ಕೃಷ್ಣ ಸಲಹೆ ನೀಡಿದ್ದಾರೆ. ಸಿಎಂ ಬೊಮ್ಮಾಯಿಗೆ ಸಲಹೆ ನೀಡಿದ ಅವರು, ಇದರಿಂದ ಪ್ರವಾಸೋದ್ಯಮ ಕೂಡ ಅಭಿವೃದ್ಧಿಯಾಗುತ್ತದೆ. ಸಿಂಗಾಪುರ ನೋಡಲು ಲಕ್ಷಾಂತರ ಜನ ಹೋಗುತ್ತಾರೆ. ಸಿಂಗಾಪುರ ತುಂಬಾ ಸ್ವಚ್ಛವಾಗಿರುವುದರಿಂದ ಹೋಗುತ್ತಾರೆ. ನಮ್ಮ ಮೈಸೂರನ್ನು ಕೂಡ ಸುಂದರ ನಗರ ಮಾಡಬೇಕು. ಪ್ರಕೃತಿದತ್ತವಾಗಿ ಎಲ್ಲ ಸಿಗಬೇಕಾದರೆ ಬಳಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಪ್ರಧಾನಿ ಮೋದಿಯವರನ್ನು ಹೊಗಳಿದ ಎಸ್.ಎಂ.ಕೃಷ್ಷ, ಮೋದಿ ಬಹಳ ಒಳ್ಳೆಯ ಕೆಲಸ ಮಾಡಿ ದೇಶ ಕಟ್ಟುತ್ತಿದ್ದಾರೆ. ನಾನು ಬಹಳಷ್ಟು ಜನಪ್ರತಿನಿಧಿಗಳ ಆಡಳಿತ ನೋಡಿದ್ದೇನೆ. ಮೋದಿ ಬಹಳ ಶ್ರದ್ಧೆ, ಅಚ್ಚುಕಟ್ಟಾಗಿ ದೇಶ ಕಟ್ಟುತ್ತಿದ್ದಾರೆ. ತಾಯಿ ಚಾಮುಂಡಿ ಮೋದಿ ಅವರಿಗೆ ಇನ್ನಷ್ಟು ಶಕ್ತಿ ಕೊಡಲಿ. ಭಾರತ ಇದೀಗ ಅಭಿವೃದ್ಧಿಯತ್ತ ಸಾಗುತ್ತಿದೆ. ಭಾರತ ಚೀನಾದ ನಡುವೆ ಪೈಪೋಟಿಯಿದೆ. ಮತ್ಸರವಿಲ್ಲದ ಸ್ಪರ್ಧೆ ಸ್ವಾಗತರ್ಹ ಎಂದು ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಎಸ್.ಟಿ. ಸೋಮಶೇಖರ್, ಸುನಿಲ್ ಕುಮಾರ್, ಆರ್ ಅಶೋಕ್, ಶಿವರಾಂ ಹೆಬ್ಬಾರ್, ಭೈರತಿ ಬಸವರಾಜು, ಶಶಿಕಲಾ ಜೊಲ್ಲೆ, ಕೆ.ಸುಧಾಕರ್, ನಾರಾಯಣ ಗೌಡ, ಬಿ.ಸಿ. ಪಾಟೀಲ್, ಶಾಸಕರಾದ ಎಲ್. ನಾಗೇಂದ್ರ, ರಾಮದಾಸ್ , ಜಿ.ಟಿ. ದೇವೇಗೌಡ, ತನ್ವೀರ್ ಸೇಠ್, ಅರವಿಂದ ಬೆಲ್ಲದ್, ಮಹದೇವ್ ಸೇರಿ ಸಂಸದರು, ಶಾಸಕರು ಭಾಗಿಯಾಗಿದ್ದರು.
ಪೊಟೋ ಕೃಪೆ: ಅರುಣ್ ಮೈಸೂರು
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…….