ದೊಡ್ಡಬಳ್ಳಾಪುರ: ನಗರಸಭೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಕುರಿತಂತೆ ಸಾರ್ವಜನಿಕರಿಂದ ದೂರುಗಳು ಸಲ್ಲಿಕೆಯಾಗಿದ್ದ ಹಿನ್ನೆಲೆಯಲ್ಲಿ ಗುರುವಾರ ಸಂಜೆ ನಡೆದ ಎಸಿಬಿ ಅಧಿಕಾರಿಗಳ ದಿಢೀರ್ ಭೇಟಿ ನೀಡಿ ನಡೆಸಿದ ಪರಿಶೀಲನೆ ರಾತ್ರಿ 11 ಗಂಟೆಗೆ ಅಂತ್ಯಗೊಂಡಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸಿಬಿ ಡಿವೈಎಸ್ಪಿ ಜಗದೀಶ್ ಅವರ ನೇತೃತ್ವದಲ್ಲಿ 10 ವಾಹನಗಳಲ್ಲಿ ಆಗಮಿಸಿದ್ದ ಅಧಿಕಾರಿಗಳ ತಂಡದಲ್ಲಿ ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಯ ಎಸಿಬಿ ಅಧಿಕಾರಿಗಳು ಇದ್ದರೆನ್ನಲಾಗಿದೆ.
ಸಂಜೆ 4 ಗಂಟೆ ವೇಳೆಗೆ ನಗರಸಭೆಗೆ ಭೇಟಿ ನೀಡಿದ ಎಸಿಬಿ ಅಧಿಕಾರಿಗಳು ಕಚೇರಿಯ ಎಲ್ಲಾ ವಿಭಾಗಗಳ ಕೊಠಡಿಗಳ ಬಾಗಿಲುಗಳನ್ನು ಹಾಕಿಕೊಂಡು ಕಡತಗಳ ಪರಿಶೀಲನೆ ಆರಂಭಿಸಿದ್ದರು. ನಗರಸಭೆ ಕಚೇರಿಯ ಕಟ್ಟಡದ ಸುತ್ತಲಿನ ಕಿಟಕಿಗಳ ಬಳಿ ಪೊಲೀಸರು ಕಾವಲು ಕಾಯುತ್ತಿದ್ದ ದೃಶ್ಯ ಕಂಡು ಬಂತು.
ನಗರಸಭೆಯಲ್ಲಿನ ಕಂದಾಯ, ಆರೋಗ್ಯ ಹಾಗೂ ಎಂಜಿನಿಯರ್ ವಿಭಾಗಕ್ಕೆ ಸಂಬಂಧಿಸಿದಂತೆಯೇ ಹೆಚ್ಚಿನ ಪರಿಶೀಲನೆ ನಡೆದಿದೆ.
ಸಿಬ್ಬಂದಿಗಳ ಬಳಿಯಿದ್ದ ನಗದು ವಶ: ದಾಳಿಯ ವೇಳೆ ನಗರಸಭೆ ಸಿಬ್ಬಂದಿಗಳ ಬಳಿಯಿದ್ದ ರೂ. 62.500 ನಗದನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದ್ದು, ಕಾರಣ ಕೇಳಿ ನೋಟಿಸ್ ನೀಡಿದ್ದಾರೆ ಎಂದು ಎಸಿಬಿ ಹಿರಿಯ ಅಧಿಕಾರಿಗಳು ಹರಿತಲೇಖನಿಗೆ ತಿಳಿಸಿದ್ದಾರೆ.
ಸಂಜೆ 04 ಗಂಟೆಗೆ ಆರಂಭವಾದ ಕಡತಗಳ ಪರಿಶೀಲನೆ ರಾತ್ರಿ 11 ಗಂಟೆಗೆ ಮುಗಿದಿದ್ದು, ನಗದು ಹಾಗೂ ಕೆಲ ಕಡತಗಳನ್ನು ಅಧಿಕಾರಿಗಳು ಕೊಂಡೊಯ್ದಿದ್ದಾರೆಂದು ಮೂಲಗಳು ತಿಳಿಸಿವೆ.
ಹೆಚ್ಚಿನ ಮಾಹಿತಿಗಾಗಿ ಎಸಿಬಿ ಅಧಿಕಾರಿಗಳು ಬಿಡುಗಡೆ ಮಾಡುವ ಪ್ರಕಟಣೆಗಾಗಿ ನಿರೀಕ್ಷಿಸಲಾಗುತ್ತಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……