ದೊಡ್ಡಬಳ್ಳಾಪುರ: ಅನಿಯಮಿತ ಆಹಾರ ಸೇವನೆ, ವ್ಯಾಯಾಮದ ಕೊರತೆ, ಅಶಿಸ್ತಿನ ಜೀವನ ಕಮಗಳು ಹೃದ್ರೋಗಗಳಿಗೆ ಕಾರಣವಾಗಲಿದೆ. ಇದನ್ನು ಬದಲಿಸಿಕೊಂಡರೆ ಶೇ.80ರಷ್ಟು ಹೃದಯ ಸಂಬಂಧಿ ರೋಗಗಳನ್ನು ತಡೆಗಟ್ಟಬಹುದಾಗಿದೆ ಎಂದು ಶ್ರೀರಾಮ ಆಸ್ಪತ್ರೆಯ ಡಾ.ಎಚ್.ಜಿ.ವಿಜಯ್ ಕುಮಾರ್ ಹೇಳಿದರು.
ತಾಲ್ಲೂಕು ವಕೀಲರ ಸಂಘ ಹಾಗೂ ಶ್ರೀರಾಮ ಆಸ್ಪತ್ರೆ ವತಿಯಿಂದ ವಲೀಕರ ಸಂಘದಲ್ಲಿ ಬುಧವಾರ ನಡೆದ ವಿಶ್ವ ಹೃದಯ ದಿನಾಚರಣೆ ಅಂಗವಾಗಿ ನಡೆದ ಉಚಿತ ಹೃದಯ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.
ಇತ್ತೀಚೆಗೆ ಹೆಚ್ಚುತ್ತಿರುವ ಜಂಕ್ಪುಡ್, ಬೇಕರಿ ಪದಾರ್ಥಗಳ ಸೇವನೆಯಿಂದಾಗಿ ಚಿಕ್ಕ ವಯಸ್ಸಿನಲ್ಲೆ ಹೃದಯ ಸಂಬಂಧಿ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಶುದ್ದ ಮತ್ತು ಉತ್ಕೃಷ್ಟವಾದ ಆಹಾರ ಸೇವನೆ, ನಿತ್ಯ ದೇಹ ದಂಡನೆಯಿಂದ ಹೃದಯ ಸಂಬಂಧಿ ರೋಗದಿಂದ ದೂರ ಉಳಿಯಬಹುದಾಗಿದೆ. ಸತ್ವಯುತ ಆಹಾರ ಮತ್ತು ನಿರಂತರ ಲವಲವಿಕೆಯಿಂದ ಇರುವುದರಿಂದ ಹಲವಾರು ರೋಗಗಳು ಬಾರದಂತೆ ತಡೆಗಟ್ಟಬಹುದು. ಅಗತ್ಯವಾದ ಹಾಲು, ಬೆಣ್ಣೆ ಮತ್ತು ತುಪ್ಪವನ್ನು ಸೇವನೆ ಮಾಡುವುದು ಅಗತ್ಯವಾಗಿದೆ. ಇದರೊಂದಿಗೆ ವಯೋಮಾನದ ಆಧಾರದ ಮೇಲೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಮುಂಜಾಗ್ರತೆ ಕ್ರಮವಾಗಿದೆ ಎಂದರು.
ಧೂಮಪಾನ, ಮಧ್ಯಪಾನ ಸೇವನೆ ಮಾಡುವವರಲ್ಲಿ ಹೃದಾಯಾಘಾತದ ಪ್ರಮಾಣ ಹೆಚ್ಚಾಗಿರಲಿದೆ. ಇಂದು ಎಲ್ಲರ ಬದುಕು ಸಹ ಸದಾ ಒತ್ತಡದಲ್ಲೇ ಇದೆ. ಈ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ ಪ್ರತಿ ದಿನ ಒಂದು ಗಂಟೆ ಸಮಯವನ್ನು ನಮ್ಮ ದೈಹಿಕ ಆರೋಗ್ಯದ ಕಡೆಗೆ ಗಮನ ನೀಡಲು ಮೀಸಲಿಡಬೇಕಿದೆ. ವಿಶ್ವದ ಇತರೆ ದೇಶಗಳಿಗೆ ಹೊಲಿಕೆ ಮಾಡಿದರೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಹೃದಯಾಘಾತದ ಪ್ರಮಾಣ ಹೆಚ್ಚಾಗಿದೆ. ಇದಕ್ಕೆ ಕಾರಣ ಅರಿವಿನ ಕೊರತೆಯಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಅರವಿಂದ ಸಾಯಿಬಣ್ಣ ಹಾಗರಗಿ, ಆರೋಗ್ಯ ಚನ್ನಾಗಿ ಇದ್ದಾಗಲೇ ಕಾಳಜಿವಹಿಸಿದರೆ ಮಾತ್ರ ನಮ್ಮ ಬದುಕು ಸುಗಮವಾಗಿ ಸಾಗಲು ಅನುಕೂಲ. ಹೃದಯಾಘಾತ ಈಗ ನಗರ ಪ್ರದೆಶದವರಿಗೆ ಮಾತ್ರ ಸೀಮಿತವಾಗಿಲ್ಲ ಗ್ರಾಮಿಣ ಪ್ರದೆಶದಲ್ಲೂ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೃದಯಾಘಾತ ಕುರಿತಂತೆ ಗ್ರಾಮೀಣ ಭಾಗದ ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದರು.
ಪ್ರಧಾನ ಸಿವಿಲ್ ನ್ಯಾಯಾದೀಶರು ಕೆ.ಆರ್.ದೀಪ ಮಾತನಾಡಿ, ದೇಶದ ಸದೃಢತೆಗೆ ಜನರ ಆರೋಗ್ಯವು ಮುಖ್ಯವಾಗಿರಲಿದೆ. ಇಂದಿನ ಆಹಾರ ಪದ್ಧತಿಗಳಿಂದಾಗಿ ಸದಾ ನಮ್ಮ ಆರೋಗ್ಯದ ಬಗ್ಗೆಯು ಕಾಳಜಿವಹಿಸದರೆ ಮಾತ್ರ ನಮ್ಮ ದೈನಂದಿನ ಜೀವನ ಸುಗಮವಾಗಿ ನಡೆಯಲು ಸಾಧ್ಯವಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಡಿ.ಎಂ.ಬೈರೇಗೌಡ ವಹಿಸಿದ್ದರು. ಹೆಚ್ಚುವರಿ ಹಿರಿಯ ನ್ಯಾಯಾಧೀಶರಾದ ಜ್ಯೋತಿ ಎಸ್.ಕಾಳೆ, ಹೆಚ್ಚುವರಿ ನ್ಯಾಯಾಧೀಶರಾದ ಮಮತಾ ಶಿವಪೂಜೆ, ತಾಲ್ಲೂಕು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಖಜಾಂಚಿ ಎ.ವಿ.ಮುರುಳಿ, ಉಪಾಧ್ಯಕ್ಷ ಎಚ್.ಎಂ.ಮಂಜುನಾಥ್ ಹಾಗೂ ಸಂಘಧ ಪದಾಧಿಕಾರಿಗಳು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..