ದೊಡ್ಡಬಳ್ಳಾಪುರ: ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಆರ್.ಎಲ್.ಜಾಲಪ್ಪ ಸಮೂಹ ವಿದ್ಯಾಸಂಸ್ಥೆಗಳಿಂದ ಆರೋಗ್ಯ ಶಿಕ್ಷಣ ಪರಿಸರಕ್ಕೆ ಒತ್ತು ನೀಡಿ, ಸಾಮಾಜಿಕ ಸೇವಾ ಕರ‍್ಯದಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾಸಂಸ್ಥೆಯ ಆವರಣದಲ್ಲಿ ಆ.11ರಂದು ಆರ್.ಎಲ್.ಜಾಲಪ್ಪ ವಿದ್ಯಾಸಂಸ್ಥೆಗಳ ಲಯನ್ಸ್ ಕ್ಲಬ್ ಆರಂಭಿಸಲಾಗುತ್ತಿದೆ ಎಂದು ಆರ್.ಎಲ್.ಜಾಲಪ್ಪ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ಜೆ.ರಾಜೇಂದ್ರ ತಿಳಿಸಿದರು.
ನಗರದ ಆರ್.ಎಲ್.ಜಾಲಪ್ಪ ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ದೊಡ್ಡಬಳ್ಳಾಪುರದ ಲಯನ್ಸ್ ಕ್ಲಬ್‌ನಿಂದ ಕಣ್ಣಿನ ಶಿಬಿರಗಳು, ರಕ್ತದಾನ, ಡಯಾಲಿಸಿಸ್, ಮಧುಮೇಹ ತಪಾಸಣಾ ಶಿಬಿರಗಳು ನಡೆಯುತ್ತಿದ್ದು, ಹಲವು ಸೇವೆ ಸಲ್ಲಿಸುತ್ತಿದೆ. ಇದರೊಂದಿಗೆ ಆರ್.ಎಲ್.ಜಾಲಪ್ಪ ವಿದ್ಯಾಸಂಸ್ಥೆಗಳ ಲಯನ್ಸ್ ಕ್ಲಬ್‌ನಿಂದ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿಶೇಷವಾಗಿ ಡಯಾಬಿಟಿಕ್ ಹಾಗೂ ಕ್ಯಾನ್ಸರ್ ಶಿಬಿರಗಳಲ್ಲಿ ನುರಿತ ವೈದ್ಯರಿಂದ ಪ್ರಾರಂಭಿಕ ಹಂತದಲ್ಲಿಯೇ ಚಿಕಿತ್ಸೆ, ರಕ್ತದ ಒತ್ತಡಕ್ಕೆ ಚಿಕಿತ್ಸೆ ಶಿಬಿರಗಳನ್ನು ಕೋಲಾರದ ದೇವರಾಜ ಅರಸು ವೈದ್ಯಕೀಯ ಕಾಲೇಜಿನ ಸಹಯೋಗದಲ್ಲಿ ಕೈಗೊಳ್ಳಲಾಗುವುದು. ವಿದ್ಯಾಸಂಸ್ಥೆಗಳ ಸಂಸ್ಥಾಪಕ ಆರ್.ಎಲ್.ಜಾಲಪ್ಪ ಅವರ ಪರಿಸರ ಕಾಳಜಿಯನ್ನು ಸಾಕಾರಗೊಳಿಸುವಲ್ಲಿ ಪರಿಸರಕ್ಕೆ ಅನುಕೂಲವಾಗುವ, ಪಶು ಪಕ್ಷಿಗಳಿಗೆ ಅನುಕೂಲವಾಗುವ ಹಣ್ಣುಗಳನ್ನು ನೀಡುವ ಗಿಡಮರ ನೆಡುವ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಲಯನ್ಸ್ ಕ್ಲಬ್‌ನ ಪ್ರಾಂತೀಯ ಛೇರ್‌ಪರ್ಸನ್ ಕೆ.ವಿ.ಪ್ರಭುಸ್ವಾಮಿ ಮಾತನಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವಿದ್ಯಾಸಂಸ್ಥೆಯ ಆವರಣದಲ್ಲಿ ಜಿಲ್ಲೆಯ ಮೊದಲ ಹಾಗೂ 67 ನೇ ಕ್ಲಬ್ ಆಗಿ ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್ಸ್ಟಿಟ್ಯೂಷನ್ ರಚನೆಯಾಗುತ್ತಿದೆ. ಸಮಾಜಮುಖಿಯಾಗಿ ಸೇವಾ ಕಾರ್ಯವನ್ನು ನಡೆಸುತ್ತಿರುವವರನ್ನು ಒಂದು ಗೂಡಿಸಿ ಕ್ಲಬ್ ಮಾಡಲಾಗಿದ್ದು, ಲಯನ್ಸ್ ಸೇವಾ ಕಾರ್ಯವನ್ನು ವಿಸ್ತರಿಸಲಾಗುತ್ತಿದೆ. ಆ.11ರಂದು ಜಿಲ್ಲಾ ಮಾಜಿ ರಾಜ್ಯಪಾಲ ಅಚ್ಯುತಾನಂದ ರೆಡ್ಡಿ ನೂತನ ಅಧ್ಯಕ್ಷರಾಗಿ ಎಂ.ಆರ್.ಶ್ರೀನಿವಾಸ್ ಹಾಗೂ ತಂಡಕ್ಕೆ ಪ್ರಮಾಣವಚನ ಬೋಧಿಸಲಿದ್ದಾರೆ. ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಜಿ.ಗೋಪಾಲ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ಲಯನ್ಸ್ ಪದಾಧಿಕಾರಿ ಎಂ.ಆರ್.ಶ್ರೀನಿವಾಸ್, ಕಾರ್ಯದರ್ಶಿ ಬಾಬು ರೆಡ್ಡಿ, ಉಪಾಧ್ಯಕ್ಷ ಎಲ್.ಎನ್.ಪ್ರದೀಪ್ ಕುಮಾರ್, ಪ್ರಾಂಶುಪಾಲರಾದ ಡಾ.ಎಂ.ಶ್ರೀನಿವಾಸ್ ರೆಡ್ಡಿ ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..