ಬೆಂ.ಗ್ರಾ.ಜಿಲ್ಲೆ: ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಕೋವಿಡ್-19 ಮೂರನೇ ಅಲೆಯ ಅಪಾಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಜಿಲ್ಲೆಯ ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸಹಕರಿಸಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಧಾರ್ಮಿಕ ಸ್ಥಳಗಳಾದ ದೇವಸ್ಥಾನ, ಮಸೀದಿ ಮತ್ತು ಚರ್ಚ್ಗಳಲ್ಲಿ ಕೋವಿಡ್-19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ದೇವಸ್ಥಾನಗಳಲ್ಲಿ ದೇವರ ದರ್ಶನ, ದೈನಂದಿನ ಪೂಜೆಯನ್ನು ಹೊರತುಪಡಿಸಿ ಸೇವೆ, ಪ್ರಸಾದ, ಅನ್ನ ಸಂತರ್ಪಣೆ, ಮುಡಿ ತೆಗೆಯುವುದು ಹಾಗೂ ವಸತಿ ವ್ಯವಸ್ಥೆಗಳಿಗೆ ಅವಕಾಶವಿರುವುದಿಲ್ಲ.
ಜಾತ್ರೆ, ಉತ್ಸವ, ಮೆರವಣಿಗೆ ಮತ್ತು ಧಾರ್ಮಿಕ ಸಭೆ-ಸಮಾರಂಭಗಳನ್ನು ನಿರ್ಬಂಧಿಸಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೆ ಓಡಾಡುವವರಿಗೆ “ಸಾಂಕ್ರಾಮಿಕ ರೋಗಗಳ ಕಾಯ್ದೆ” ಅಡಿಯಲ್ಲಿ ಸರ್ಕಾರಿ ಮಾರ್ಗಸೂಚಿಗಳಂತೆ ದಂಡ ವಿಧಿಸಲಾಗುವುದಲ್ಲದೆ, ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು 20 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಮದುವೆ ಮತ್ತು ಇನ್ನಿತರೆ ಸಮಾರಂಭಗಳಲ್ಲಿ 100 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಸಂಬಂಧಪಟ್ಟ ತಹಶೀಲ್ದಾರ್‌ರವರಿಂದ ಕಡ್ಡಾಯವಾಗಿ ಪೂರ್ವಾನುಮತಿಯನ್ನು ಪಡೆದು, ಸಮಾರಂಭದ ವಿಡಿಯೋ ಚಿತ್ರೀಕರಣವನ್ನು ಮಾಡಿ ತಹಶೀಲ್ದಾರ್‌ರವರಿಗೆ ಕಡ್ಡಾಯವಾಗಿ ಸಲ್ಲಿಸಬೇಕು.
ಜಿಲ್ಲೆಯಲ್ಲಿ ಕೋವಿಡ್-19 ಟೆಸ್ಟಿಂಗ್ ಹೆಚ್ಚಿಸುವ ಮೂಲಕ ಕೋವಿಡ್-19 ಪ್ರಕರಣಗಳನ್ನು ಕಟ್ಟುನಿಟ್ಟಾಗಿ ಪತ್ತೆ ಮಾಡಿ, ಐಸೊಲೇಷನ್ ಮಾಡಲಾಗುವುದು ಹಾಗೂ ಕೋವಿಡ್ ಸಹಾಯವಾಣಿ ಕೇಂದ್ರದ ಮುಖಾಂತರ ಐಸೊಲೇಷನ್‌ನಲ್ಲಿರುವಂತಹ ವ್ಯಕ್ತಿಗಳಿಗೆ ಕೋವಿಡ್ ಕಿಟ್‌ನ್ನು ವಿತರಿಸಲಾಗುವುದು.
ಸರ್ಕಾರದ ಮಾರ್ಗಸೂಚಿಗಿಂತ ಹೆಚ್ಚಿನ ಪ್ರಕರಣಗಳು ಕಂಡುಬಂದಲ್ಲಿ ಅಂತಹ ಸಮುಚ್ಚಯಗಳನ್ನು “ಸೂಕ್ಷ್ಮ ನಿರ್ಬಂಧಿತ ಪ್ರದೇಶವೆಂದು” ಘೋಷಣೆ ಮಾಡಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗುವುದು ಹಾಗೂ ಹಳ್ಳಿಗಳಲ್ಲಿ ಸರ್ಕಾರದ ಮಾರ್ಗಸೂಚಿಗಿಂತ ಹೆಚ್ಚು ಪ್ರಕರಣಗಳು ಕಂಡುಬಂದಲ್ಲಿ, ಅಂತಹ ಹಳ್ಳಿಗಳನ್ನು ನಿರ್ಬಂಧಿತ ವಲಯಗಳೆಂದು ಗುರುತಿಸಿ, ಸರ್ಕಾರಿ ಕೋವಿಡ್-19ರ ಮಾನದಂಡದಂತೆ “ಸೀಜ್” ಮಾಡಲಾಗುವುದು.
ಹೋಟೇಲ್, ಲಾಡ್ಜ್, ರೆಸಾರ್ಟ್, ಪಾರ್ಟಿ ಹಾಲ್ ಹಾಗೂ ಕಲ್ಯಾಣ ಮಂಟಪಗಳ ಮಾಲೀಕರು ಕೋವಿಡ್-19 ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಹಾಗೂ ಮುಂಬರುವ ದಿನಗಳಲ್ಲಿ ಸರಣಿ ಸಾಲಿನಲ್ಲಿ ಧಾರ್ಮಿಕ ಹಬ್ಬಗಳು ಬರುತ್ತಿರುವುದರಿಂದ ಸಾರ್ವಜನಿಕ ಸ್ಥಳಗಳಲ್ಲಿ, ಸಾರ್ವಜನಿಕ ಮೈದಾನ, ಪಾರ್ಕ್, ಮಾರುಕಟ್ಟೆ ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಗುಂಪು ಸೇರಿ, ಹಬ್ಬ ಆಚರಿಸುವಂತಿಲ್ಲ.
ಈ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಾಹಣಾ ಕಾಯ್ದೆ 2005ರ ವಿಭಾಗ 22ರಡಿ ಮತ್ತು ಸಂಬಂಧಿತ ಸೆಕ್ಷನ್‌ಗಳಾದ 51 ರಿಂದ 60ರಡಿ, ಐಪಿಸಿ ಸೆಕ್ಷನ್ 188 ಹಾಗೂ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ 2020ರ ಸೆಕ್ಷನ್ 4, 5, ಮತ್ತು 10ರಡಿ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಶ್ರೀನಿವಾಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ಶೇರ್ ಮಾಡಿ.