ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ ವಿವಿಧೆಡೆ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಜೂ.20ರಂದು ಕೊಂಗಾಡಿಯಪ್ಪ ರಸ್ತೆಯಲ್ಲಿ ಹೊಂಡಾ ಆಕ್ಟೀವಾ ದ್ವಿಚಕ್ರ ವಾಹನ ಕಳವು ಪ್ರಕರಣ ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ, ನಂತರ ನಗರ ಸೇರಿದಂತೆ ಸ್ಕೌಟ್ ಕ್ಯಾಂಪ್, ರೈಲ್ವೆ ಸ್ಟೇಷನ್, ಬಾಶೆಟ್ಟಿಹಳ್ಳಿ, ಫ್ಯಾಕ್ಟರಿ ಸರ್ಕಲ್ ಹಾಗೂ ಇತರೆ ಕಡೆಗಳಲ್ಲಿ ದ್ವಿಚಕ್ರ ವಾಹನಗಳು ಕಳವಾಗಿ ಪ್ರಕರಣಗಳು ದಾಖಲಾಗಿದ್ದು ಸವಾಲಾಗಿ ಪರಿಣಮಿಸಿತ್ತು.
ಈ ಕುರಿತು ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಡಿವೈಎಸ್ಪಿ ಟಿ.ರಂಗಪ್ಪ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಎಂ.ಬಿ.ನವೀನ್ ಕುಮಾರ್ ನೇತೃತ್ವದ ವಿಶೇಷ ತಂಡವನ್ನು ರಚಿಸಲಾಗಿತ್ತು.
ಈ ತಂಡ ಕಾರ್ಯಾಚರಣೆಗೆ ಇಳಿದಿದ್ದು, ಚಾಕಚಕ್ಯತೆಯಿಂದ ದ್ವಿಚಕ್ರ ಕಳವು ಪ್ರಕರಣಗಳ ಜಾಲವನ್ನು ಭೇದಿಸಿದೆ. ಆರೋಪಿಗಳಾದ ಹೊನ್ನಾಶೆಟ್ಟಿಹಳ್ಳಿ ಗ್ರಾಮದ ಪ್ರವೀಣ (25 ವರ್ಷ), ಹಿಂದೂಪುರದವರಾದ ಶೇಖ್ ನಿಜಾಂ (25ವರ್ಷ), ಮೆಹಬೂಬ್ ಬಾಷಾ (30ವರ್ಷ) ಇವರನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದು, ಈ ಆರೋಪಿಗಳು ಒಂಬತ್ತು ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ತಿಳಿದು ಬಂದಿದೆ.
ಪ್ರವೀಣ ಮತ್ತು ಶೇಖ್ ನಿಜಾಂ ದೊಡ್ಡಬಳ್ಳಾಪುರ ಹಾಗೂ ಗೌರಿಬಿದನೂರಿನಲ್ಲಿ ಮನೆ ಕನ್ನಾ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ಕಳವು ಮಾಡಿದ ದ್ವಿಚಕ್ರ ವಾಹನಗಳನ್ನು ಸಾರ್ವಜನಿಕರಿಗೆ ಅಡವಿಡುತ್ತಿದ್ದ ಆಸಾಮಿಗಳಿಂದ 6 ಲಕ್ಷ ಮೌಲ್ಯದ 18 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಆರೋಪಿಗಳ ಪತ್ತೆಗೆ ಶ್ರಮಿಸಿದ ಸರ್ಕಲ್ ಇನ್ಸ್ಪೆಕ್ಟರ್ ಎಂ.ಬಿ.ನವೀನ್ ಕುಮಾರ್, ಸಬ್ ಇನ್ಸ್ಪೆಕ್ಟರ್ ಬಿ.ಎಂ.ಗೋವಿಂದ, ಸಿಬ್ಬಂದಿಗಳಾದ ಪಾಂಡುರಂಗ, ಮೌಲಪ್ಪ, ಮುನಿರಾಜು, ಕುಮಾರ್ ಬಾಸಗಿ ಹಾಗೂ ಪುಟ್ಟನರಸಪ್ಪರನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..