ಬೆಂಗಳೂರು: ಭಾರತ ಸರ್ಕಾರದ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಜಲ ಶಕ್ತಿ ಮಂತ್ರಾಲಯದ ವತಿಯಿಂದ ಸ್ವಚ್ಛ ಭಾರತ್ ಮಿಷನ್ (ಗ್ರಾ) ಹಂತ-11 ಯೋಜನೆಯಡಿ “ರಾಷ್ಟ್ರೀಯ ಸ್ವಚ್ಛತಾ ಫಿಲ್ಮೋಂ ಕಾ ಅಮೃತ ಮಹೋತ್ಸವ” (ಅಜಾದ್ ಕಾ ಅಮೃತ ಮಹೋತ್ಸವ) ಎಂಬ ಹೆಸರಿನಡಿಯಲ್ಲಿ ರಾಷ್ಟ್ರ ಮಟ್ಟದ ಕಿರುಚಿತ್ರ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಸಮಗ್ರ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯ ಮೂಲಕ ಎಲ್ಲಾ ಗ್ರಾಮಗಳಲ್ಲಿ ಶೌಚಾಲಯಗಳ ಬಳಕೆಯ ಸುಸ್ಥಿರತೆಯನ್ನು ಕಾಯ್ದುಕೊಂಡು ಓಡಿಎಫ್‍ನ ಹಾದಿಯಲ್ಲಿ ಸಾಗುವ ಮೂಲಕ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆ (2014-2019) 1ನೇ ಹಂತದಲ್ಲಿ ಸಾಧಿಸಿದ ಅಸಾಮಾನ್ಯ ಮೈಲಿಗಲ್ಲನ್ನು ಮುಂದೆ ಸಾಗಿಸಲು ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಉದ್ದೇಶಿಸಿದೆ.
ಸ್ವಚ್ಛ ಭಾರತ್ ಮಿಷನ್ (ಗ್ರಾ)ಯೋಜನೆ ಹಂತ-11ರ ಉದ್ದೇಶಗಳಂತೆ ಓಡಿಎಫ್- ಪ್ಲಸ್ ಗುರಿಗಳ ಕುರಿತು ಗ್ರಾಮೀಣ ಜನರಲ್ಲಿ ಸಾಮೂಹಿಕ ಜಾಗೃತಿ ಮೂಡಿಸಲು ಈ ಸ್ಪರ್ಧೆಯು ಬೃಹತ್ ಮಾಹಿತಿ ಶಿಕ್ಷಣ ಮತ್ತು ಸಂವಹನ (ಐ.ಇ.ಸಿ.) ಅಭಿಯಾನವಾಗಿ ಕಾರ್ಯನಿರ್ವಹಿಸಲಾಗಿದ್ದು, ವ್ಯಕ್ತಿಗಳು ಮತ್ತು ಸಂಸ್ಥೆಗಳ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಮೂಲಕ ಓಡಿಎಫ್-ಪ್ಲಸ್ ಘಟಕಾಂಶಗಳ ಕುರಿತು ಕಿರುಚಿತ್ರಗಳ ಸ್ವರೂಪದಲ್ಲಿ ಅವರ ವಿವಿಧ ಆಲೋಚನೆಗಳು ಮತ್ತು ಸೃಜನಶೀಲತೆಯನ್ನು ಸೆರೆಹಿಡಿಯಲು ಇದು ಸಹಕಾರಿಯಾಗಲಿದೆ.
ಪ್ರಶಸ್ತಿ ವಿವರ ಮತ್ತು ಭಾಗವಹಿಸುವಿಕೆಯ ವಿಷಯಗಳ ವಿವರ ಇಂತಿದೆ. ಸ್ವಚ್ಛ ಭಾರತ್ ಮಿಷನ್ (ಗ್ರಾ)ಯೋಜನೆ ಹಂತ-11ರ ಘಟಕಾಂಶಗಳ ಕುರಿತು ಎರಡು ವಿಭಾಗಗಳಲ್ಲಿ / ಎರಡು ವರ್ಗಗಳಲ್ಲಿ ಕಿರುಚಿತ್ರಗಳನ್ನು ತಯಾರಿಸಬಹುದಾಗಿದೆ.
ಒಬ್ಬ ವ್ಯಕ್ತಿ ಮತ್ತು ಸಂಸ್ಥೆಗಳು ಹಲವು ಕಿರುಚಿತ್ರಗಳನ್ನು ತಯಾರಿಸಿ ಸಲ್ಲಿಸಬಹುದಾಗಿದೆ. ಇದಕ್ಕೆ ಯಾವುದೇ ಮಿತಿ ಇರುವುದಿಲ್ಲ. ಕಿರುಚಿತ್ರ ತಯಾರಿಸಬೇಕಾದ ವಿಷಯಗಳು ಮತ್ತು ಪ್ರಶಸ್ತಿ ಮೊತ್ತ ವಿವರ ಈ ಕೆಳಕಂಡಂತಿದೆ.
ಒಂದನೇ ವರ್ಗ: (ವಿಷಯಾಧಾರಿತ) ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆ ಹಂತ-11ರ ಅಥವಾ ಓಡಿಎಫ್ ಪ್ಲಸ್ ನ ಘಟಕಾಂಶಗಳನ್ನು ಆಧರಿಸಿದೆ. ಜೈವಿಕ ವಿಘಟನೆಯ ತ್ಯಾಜ್ಯ ನಿರ್ವಹಣೆ, ಗೋಬರ್ಧನ್, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ, ಬೂದು ನೀರು ನಿರ್ವಹಣೆ, ಮಲ ತ್ಯಾಜ್ಯ ನಿರ್ವಹಣೆ ಹಾಗೂ ನಡವಳಿಕೆ ಬದಲಾವಣೆ ಈ ಪ್ರತಿ ವಿಷಯಕ್ಕೂ ಮೂರು ಬಹುಮಾನಗಳನ್ನು ನೀಡಲಾಗುತ್ತದೆ. ಪ್ರಥಮ ಬಹುಮಾನ 1,60,000 ರೂ., ಪ್ರಥಮ ರನ್ನರ್ ಅಪ್ ಬಹುಮಾನ 60,000 ರೂ. ಹಾಗೂ ಎರಡನೇ ರನ್ನರ್ ಅಪ್ ಬಹುಮಾನ 30,000 ರೂ. ಗಳ ನಗದು ಬಹುಮಾನ ನೀಡಲಾಗುತ್ತದೆ.
ಎರಡನೇ ವರ್ಗ: (ಭೌಗೊಳಿಕ ವರ್ಗ) ಇದು ಸಂಪೂರ್ಣವಾಗಿ ಭೌಗೋಳಿಕ ಪ್ರದೇಶದ ಮೇಲೆ ಕೇಂದ್ರಿಕರಿಸಿದೆ. ಈ ವಿಭಾಗದಲ್ಲಿ ಕಿರುಚಿತ್ರವು ಸಮಗ್ರ ಸ್ವಚ್ಛತಾ ಸಂದೇಶಗಳನ್ನು ಸೆರೆಹಿಡಿಯಬೇಕು ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಹೊಸದಾಗಿ ಪರಿಹಾರಗಳನ್ನು ಒದಗಿಸಬೇಕು. ಈ ಎರಡೂ ವರ್ಗಗಳಲ್ಲಿ ಕಿರುಚಿತ್ರಗಳು ಗ್ರಾಮೀಣ ಸೊಗಡಿನಲ್ಲಿರಬೇಕು. ಆದಾಗ್ಯೂ ಈ ಸ್ವಚ್ಛತಾ ಸಂದೇಶಗಳು ಅಥವಾ ಪರಿಹಾರಗಳು ಐದು ಭೌಗೋಳಿಕ ಪ್ರದೇಶಗಳಲ್ಲಿ ಅನುಸರಿಸಲು ನಿರ್ದಿಷ್ಟವಾಗಿರಬೇಕು. ಕೆಳಕಂಡ ಐದು ಭೌಗೋಳಿಕ ಪ್ರದೇಶಗಳಲ್ಲಿ ಯಾವುದನ್ನಾದರೂ ಕೇಂದ್ರಿಕರಿಸಿ ಅನೇಕ ಚಲನಚಿತ್ರಗಳನ್ನು ತಯಾರಿಸಿ ಸಲ್ಲಿಸಬಹುದಾಗಿದೆ.
ಮರುಭೂಮಿ ಪ್ರದೇಶಗಳು, ಗುಡ್ಡಗಾಡು ಪ್ರದೇಶಗಳು, ಕರಾವಳಿ ಪ್ರದೇಶಗಳು, ಬಯಲು ಸೀಮೆ ಹಾಗೂ ಪ್ರವಾಹ ಪೀಡಿತ ಪ್ರದೇಶಗಳು ಸ್ಪರ್ಧೆಯ ವಿಷಯವಾಗಿದ್ದು, ಪ್ರತಿ ವಿಷಯಕ್ಕೂ ಮೂರು ಬಹುಮಾನಗಳನ್ನು ನೀಡಲಾಗುತ್ತದೆ. ಪ್ರಥಮ ಬಹುಮಾನ 2,00,000 ರೂ., ಪ್ರಥಮ ರನ್ನರ್ ಅಪ್ ಬಹುಮಾನ 1,20,000 ರೂ. ಹಾಗೂ ಎರಡನೇ ರನ್ನರ್ ಅಪ್ ಬಹುಮಾನ 80,000 ರೂ. ನಗದು ಬಹುಮಾನ ನೀಡಲಾಗುತ್ತದೆ. ಈ ಕಿರುಚಿತ್ರಗಳನ್ನು ಸಿದ್ಧಪಡಿಸಿ www.mygov.in ಅಥವಾ https://innovateindia.mygov.in/sbmg-innovation-challengeನಲ್ಲಿ ಅಪ್‍ಲೋಡ್ ಮಾಡಬೇಕು.
ಮೇಲ್ಕಂಡ ಬಹುಮಾನಗಳನ್ನು ಈ ವರ್ಷದ ಕೊನೆಯಲ್ಲಿ ನಡೆಯುವ ಸ್ವಚ್ಛ ಭಾರತ್ ಮಿಷನ್ ಸಮಾರಂಭದಲ್ಲಿ ಈ ಎರಡು ವಿಭಾಗಗಳಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕೃತರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಿ ಸನ್ಮಾನಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..