ಧಾರವಾಡ: ತಾಲೂಕಿನ ಕವಲಗೇರಿ ಗ್ರಾಮದ ರೈತರೊಬ್ಬರು ತಮ್ಮ ಎರಡು ಎಕರೆ ಭೂಮಿಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನೆರವು ಪಡೆದು ಬೆಳೆದ ಬಾಳೆಯು ಸುಮಾರು 40 ಟನ್ ಇಳುವರಿ ನೀಡಿ, 3 ಲಕ್ಷ ರೂ.ಗಳಿಗೂ ಅಧಿಕ ಆದಾಯ ನೀಡಿದೆ.
ಕವಲಗೇರಿ ಗ್ರಾಮದ ತಿಪ್ಪಣ್ಣ ಕಲ್ಲಪ್ಪ ತಿರ್ಲಾಪುರ ಅವರು ತಮ್ಮ ಎರಡು ಎಕರೆ ಭೂಮಿಯನ್ನು ಅಂಗಾಂಶ ಬಾಳೆಯ ಹೊಸ ತೋಟವಾಗಿ ಅಭಿವೃದ್ಧಿ ಪಡಿಸಲು ತೋಟಗಾರಿಕೆ ಇಲಾಖೆ ಮೂಲಕ ಮಹಾತ್ಮಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 2020-21 ನೇ ಸಾಲಿನಲ್ಲಿ ಕೂಲಿವೆಚ್ಚವಾಗಿ 78 ಸಾವಿರ ರೂ.ಹಾಗೂ ಸಾಮಗ್ರಿ ವೆಚ್ಚವಾಗಿ 27 ಸಾವಿರ ರೂ.ಗಳ ಅನುದಾನದ ನೆರವು ಪಡೆದು,283 ಮಾನವ ದಿನಗಳನ್ನು ಸೃಜಿಸಿದ್ದರು. ಪ್ರಸಕ್ತ ಬಾಳೆಯ ಸುಮಾರು 40 ಟನ್ ಫಸಲು ನೀಡಿದ್ದು,ಅದರ ಮಾರಾಟದಿಂದ ಬೆಳೆಗಾರರಾದ ತಿಪ್ಪಣ್ಣ ಅವರು ಸುಮಾರು 3 ಲಕ್ಷ 20 ಸಾವಿರ ರೂ.ಆದಾಯ ಗಳಿಸಿದ್ದಾರೆ ಎಂದು ಹೋಬಳಿ ಮಟ್ಟದ ಸಹಾಯಕ ತೋಟಗಾರಿಕೆ ಅಧಿಕಾರಿ ಮಹೇಶ ಪಟ್ಟಣಶೆಟ್ಟಿ ತಿಳಿಸಿದ್ದಾರೆ.
ಕರೊನಾದ ಈ ಸಂಕಷ್ಟದ ದಿನಗಳಲ್ಲಿಯೂ ತೋಟಗಾರಿಕೆ ಬೆಳೆಗಳನ್ನು ಬೆಳೆದು ರೈತರು ಯಶಸ್ಸು ಸಾಧಿಸಿರುವುದು ಮಾದರಿಯಾಗಿದೆ.ಬಹು ವಾರ್ಷಿಕ ಹಣ್ಣು,ಹೂವಿನ ತೋಟಗಳನ್ನು ಹೊಸದಾಗಿ ನಿರ್ಮಿಸಿಕೊಳ್ಳಲು ಎಂಜಿ ನರೇಗಾ ಯೋಜನೆಯಲ್ಲಿ ಸಾಕಷ್ಟು ಅವಕಾಶಗಳಿವೆ. ಕಳೆದ ಸಾಲಿನಲ್ಲಿ ನಿಗದಿತಗಿಂತ ಶೇ.30 ರಷ್ಟು ಅಧಿಕ ಪ್ರಗತಿ ಸಾಧಿಸಲಾಗಿದೆ.ಈ ಬಾರಿ ಶೇ.200 ರಷ್ಟು ಅಧಿಕ ಪ್ರಗತಿ ಸಾಧಿಸುವ ಗುರಿ ಹೊಂದಲಾಗಿದೆ.ರೈತರು ಹತ್ತಿರದ ತೋಟಗಾರಿಕೆ ಅಧಿಕಾರಿ,ಸಿಬ್ಬಂದಿಯನ್ನು ಸಂಪರ್ಕಿಸಬಹುದು ಎಂದು ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಶಿವಯೋಗಿ ಮನವಿ ಮಾಡಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..