ಬೆಂಗಳೂರು: ತರಕಾರಿ ಬೆಳೆಗಳ ಉತ್ಕೃಷ್ಟ ಕೇಂದ್ರದ ಯೋಜನೆಯನ್ನು ರೂ 507.23 ಲಕ್ಷ ಅನುದಾನದೊಂದಿಗೆ ಕೇಂದ್ರ ಸರ್ಕಾರದ ಸಮಗ್ರ ತೊಟಗಾರಿಕಾ ಅಭಿವೃದ್ಧಿ ಯೋಜನೆ ಹಾಗೂ ಇಸ್ರೇಲ್‍ದ ಮಾಷಾವ್ ಸಂಸ್ಥೆಯ ತಾಂತ್ರೀಕ ಸಹಕಾರದೊಂದಿಗೆ ಧಾರವಾಡದಲ್ಲಿ ಆರಂಭಿಸಲು ಇಂದು ಮುಂಜಾನೆ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾದಲ್ಲಿ ಉದ್ಘಾಟಿಸಿದರು. ಉದ್ಘಾಟನೆಯಲ್ಲಿ ನವದೆಹಲಿಯಿಂದ ಕೇಂದ್ರ ಕೃಷಿ ಸಚಿವ ನರೇಂದ್ರಸಿಂಗ್ ತೋಮರ್ ಹಾಗೂ ಇಸ್ರೇಲ್ ರಾಯಬಾರಿ ಡಾ.ರಾನ್ ಮಲ್ಕಾರವರು ಭಾಗವಹಿಸಿದ್ದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ, ಗಣಿ ಮತ್ತು ಕಲ್ಲಿದಲ್ಲು ಸಚಿವರಾದ ಪ್ರಲ್ಹಾದ ಜೋಶಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತ ಮತ್ತು ಇಸ್ರೇಲ್ ದೇಶಗಳ ಕೃಷಿ ಯೋಜನೆಯಡಿ ಕೃಷಿ ಮತ್ತು ತೋಟಗಾರಿಕೆಯಲ್ಲಿ ಉತ್ತಮ ತಳಿಗಳ ಅಳವಡಿಕೆ ಮತ್ತು ಉತ್ಪನ್ನಗಳನ್ನು ಉತ್ಕೃಷ್ಟಗೊಳಿಸಲು ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದರು.
ತರಕಾರಿ ಬೆಳೆಗಳ ಉತ್ಕೃಷ್ಟ ಕೇಂದ್ರದಿಂದ, ಆಧುನಿಕ ಬೇಸಾಯ ತಾಂತ್ರೀಕತೆಗಳ ಬಗ್ಗೆ ರೈತರಲ್ಲಿ ಅರಿವು ಮೂಡಿಸುವುದು. ರೈತರಿಗೆ ಅತ್ಯುತಮವಾದ ಪ್ರಾಯೋಗಿಕ ತರಬೇತಿ ಕಾರ್ಯಕ್ರಮಗಳನ್ನು ಆಧುನಿಕ ತೋಟಗಾರಿಕೆ ತಂತ್ರಜ್ಞಾನದ ಬಗ್ಗೆ ಆಯೋಜಿಸುವುದು. ತೋಟಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನ ಪ್ರಾತ್ಯಕ್ಷೀಕೆಗಳ ಮೂಲಕ ಪ್ರಸ್ತುತ ಪಡಿಸುವುದು. ತೋಟಗಾರಿಕೆಯಲ್ಲಿ ತೊಡಗಿಕೊಂಡ ವೃತ್ತಿಪರರು ಮತ್ತು ಇತರರನ್ನು ರಾಷ್ಟ್ರೀಯ ಮತ್ತು ಅಂತರ್ ರಾಷ್ಟ್ರೀಯ ಜಾಲಗಳಿಗೆ ಜೋಡಿಸುವುದು. ಶೈಕ್ಷಣೀಕ ಸಂಶೋಧನಾ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಆಧುನಿಕ ತೋಟಗಾರಿಕೆಯಲ್ಲಿ ಉನ್ನತಿಯನ್ನು ಸಾಧಿಸುವುದು. ರೈತರಿಗೆ ಹೊಸ ಮತ್ತು ಸರಿಯಾದ ಆಧುನಿಕ ತಂತ್ರಜ್ಞಾನಗಳನ್ನು ಕಡಿಮೆ ವೆಚ್ಚದಲ್ಲಿ ಪೂರೈಕೆ ಸರಪಣಿಯಲ್ಲಿ ನೀಡುವ ಮೂಲಕ ಸ್ಪರ್ಧಾತ್ಮಕತೆಯನ್ನು ಉತ್ತೇಜಿಸುವುದು ಬಹುಮುಖ್ಯ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಉದ್ಘಾಟನೆ ನೇರವೆರಿಸಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರೈತರಿಗೆ ಆಧುನಿಕ ತೋಟಗಾರಿಕೆ ತಂತ್ರಜ್ಞಾನಗಳನ್ನು ರೈತರ ಹೊಲಗಳಿಗೆ ಮುಟ್ಟಿಸಲು ಸದರಿ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಇದರ ಉಪಯೋಗವನ್ನು ರಾಜ್ಯದ ರೈತ ಬಾಂದವರು ಪಡೆದುಕೊಳ್ಳುವಂತೆ ತಿಳಿಸಿದರು. ಸದರಿ ಕೇಂದ್ರಗಳಲ್ಲಿ ಆಧುನಿಕ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆಗಳು ಪರಿನಿತರ ತಂಡದೊಂದಿಗೆ ಲಭ್ಯವಿದ್ದು, ಇಸ್ರೇಲ್ ತಂತ್ರಜ್ಞಾನವನ್ನು ಬಳಸಿಕೊಳ್ಳುವುದಲ್ಲದೆ ತಮ್ಮ ಕೃಷಿಯನ್ನು ಆಧುನಿಕರಣಗೊಳ್ಳಿಸಿ, ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಲು ಪ್ರಯತ್ನಿಸುವಂತೆ ರೈತ ಬಾಂದವರಿಗೆ ಕರೆ ನೀಡಿದರು.
ಈ ಸಂಧರ್ಭದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರಸಿಂಗ್ ತೋಮರ್, ಇಸ್ರೇಲ್ ರಾಯಬಾರಿ ಡಾ.ರಾನ್ ಮಲ್ಕಾ, ತೋಟಗಾರಿಕೆ ಮತ್ತು ರೇಷ್ಮೆ ಸಚಿವರಾದ ಆರ್ ಶಂಕರ ಭಾಗವಹಿಸಿ, ಮಾತನಾಡಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….