ರಾಷ್ಟ್ರದಲ್ಲಿ ಮೂರು ಪ್ರಮುಖ ರಾಜಕೀಯ ಪಕ್ಷಗಳು ಅಸ್ತಿತ್ವದಲ್ಲಿವೆ. ಅವುಗಳಲ್ಲಿ ಪ್ರಥಮವಾಗಿ ಭಾರತೀಯ ಜನತಾ ಪಕ್ಷಕ್ಕೆ ರಾಷ್ಟ್ರೀಯವಾದ ಹಾಗೂ ಹಿಂದುತ್ವ ಎಂಬ ಸ್ವಚ್ಛ ಸಿದ್ಧಾಂತವಿದೆ. ಭಾರತ ದೇಶದ ಇತಿಹಾಸದಲ್ಲೇ ಅತ್ಯಂತ ಶಿಸ್ತಿನ ರಾಜಕೀಯ ಪಕ್ಷ ಎಂಬ ಹೆಸರನ್ನು ಬಿಜೆಪಿ ಪಡೆದಿದೆ. ಇದನ್ನು ಅನ್ಯ ಪಕ್ಷಗಳ ಕೆಲವು ನಾಯಕರು ಸಹ ಪ್ರಶ್ನಾತೀತವಾಗಿ ಒಪ್ಪಿಕೊಳ್ಳುತ್ತಾರೆ.
ಕಮ್ಯುನಿಸ್ಟ್ ಪಕ್ಷಕ್ಕೆ ಕ್ರಾಂತಿಯೆಂಬ ಮುಖವಾಡದ ಕಾರ್ಲ್ ಮಾರ್ಕ್ಸ್ ರ ಸಿದ್ಧಾಂತ ಇದೆ. ಆದರೆ ರಾಷ್ಟ್ರದ ಅತಿ ಪುರಾತನ ಪಕ್ಷ ಕಾಂಗ್ರೆಸ್ ಪಕ್ಷಕ್ಕೆ ಇವತ್ತಿಗೂ ಸಹ ಯಾವುದೇ ನಿರ್ದಿಷ್ಟ ಸಿದ್ಧಾಂತ ಇಲ್ಲ.
ಸ್ಥಾಪನೆಯಾದ ಆರಂಭದಿಂದಲೂ ತುಷ್ಟೀಕರಣ ದಲ್ಲೇ ರಾಜಕಾರಣ ನಡೆಸಿದ ಕಾಂಗ್ರೆಸ್ ಗೆ, ರಾಷ್ಟ್ರೀಯವಾದ ಆಗಲಿ ಹಿಂದುತ್ವ ಆಗಲಿ ಯಾವುದರ ಸಿದ್ಧಾಂತವೂ ಇಲ್ಲ. ಹಾಗೇನಾದರೂ ರಹಸ್ಯ ಸಿದ್ಧಾಂತ ವಿದ್ದರೆ, ಅಲ್ಪಸಂಖ್ಯಾತರ ಓಲೈಕೆ ಸಿದ್ಧಾಂತ ಇದ್ದರೂ ಇರಬಹುದು. ಉಳಿದಂತೆ ಕಾಂಗ್ರೆಸ್ ಓಲೈಕೆ ಜೊತೆಜೊತೆಗೆ ಕಮ್ಯುನಿಸ್ಟರ ಹಿಂಸಾತ್ಮಕ ಸಿದ್ಧಾಂತಗಳನ್ನು ಆಗಾಗ್ಗೆ ಎರವಲು ಪಡೆಯುವುದು ಉಂಟು.
ಈ ಪೀಠಿಕೆ ಈಗ ಯಾಕೆಂದರೆ, ಭಾರತೀಯ ಜನತಾ ಪಕ್ಷ ಆಡಳಿತದ ನಮ್ಮ ಕರ್ನಾಟಕ ರಾಜ್ಯದ ಪ್ರಸ್ತುತ ರಾಜಕಾರಣದ ಸ್ಥಿತಿಗತಿಗಳಿಗೆ ಮುನ್ನುಡಿ.
ಈಗ ಮುಖ್ಯಮಂತ್ರಿಯಾಗಿರುವ ಇದೇ ಯಡಿಯೂರಪ್ಪನವರು ಚುನಾವಣೆ ಹತ್ತಿರ ಬಂದಾಗ ಅಥವಾ ವಿರೋಧ ಪಕ್ಷದಲ್ಲಿದ್ದಾಗ ಪಕ್ಷದ ನಿಜವಾದ ಸಿದ್ಧಾಂತವನ್ನು ಅಕ್ಷರಶಃ ಪಾಲಿಸಿ ವಿಧಾನಸೌಧದಲ್ಲಿ, ವೇದಿಕೆಗಳಲ್ಲಿ , ಚುನಾವಣಾ ಭಾಷಣಗಳಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಹಿಂದೂ ವಿರೋಧಿ ನೀತಿಯನ್ನು ವಿರೋಧಿಸಿ ಅಬ್ಬರಿಸಿ ಬೊಬ್ಬಿರಿದುಬಿಡುತ್ತಾರೆ.
ಆದರೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಮೇಲೆ, ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಮೇಲೆ ಈ ಹಿಂದೆ ಹಿಂದೂ ಕಾರ್ಯಕರ್ತರಿಗೆ ನೀಡಿದ ಹಲವು ಭರವಸೆಗಳಲ್ಲಿ ಕೇವಲ ಒಂದೇ ಒಂದು ಭರವಸೆಯನ್ನು ಈಡೇರಿಸಿದ್ದಾರೆ (ಗೋಹತ್ಯಾ ನಿಷೇಧ ಕಾನೂನು.ಅದೂ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ).
ಆದರೆ, ರಾಜ್ಯ ಬಿಜೆಪಿ ಪಕ್ಷವು ಪ್ರಮುಖ ಚುನಾವಣಾ ಅಸ್ತ್ರವನ್ನಾಗಿ ಪ್ರಯೋಗಿಸಿದ, ” ಹಿಂದೂ ಕಾರ್ಯಕರ್ತರ ಸರಣಿ ಕೊಲೆಗಳು ಹಾಗೂ ಹಿಂದಿನ ಕಾಂಗ್ರೆಸ್ ಅವಧಿಯಲ್ಲಿ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳ ಅನುಮಾನಸ್ಪದ ಸಾವು” ಪ್ರಕರಣಗಳಲ್ಲಿ ನ್ಯಾಯ ಒದಗಿಸಿಕೊಡುವುದಾಗಿ ಜನತೆಗೆ ಭರವಸೆ ನೀಡಿದ್ದರು. ನಿಮಗೊಂದು ತಿಳಿದಿರಲಿ ಸ್ನೇಹಿತರೆ, 2018ರಲ್ಲಿ ಕಾಂಗ್ರೆಸ್ ಪಕ್ಷದ ಅಧಿಕಾರ ಕೊನೆಯಾದಾಗ ಅಮಾಯಕ ಹಿಂದೂ ಕಾರ್ಯಕರ್ತರ ಸರಣಿ ಕೊಲೆ ಪ್ರಕರಣಗಳ ತನಿಖೆಗಳು ಯಾವ ಹಂತದಲ್ಲಿ ಇದ್ದವೋ, ಪ್ರಸ್ತುತ ಇವತ್ತಿಗೂ ಸಹ ಒಂದಿಂಚೂ ಕದಲದೇ ಅದೇ ಹಂತದಲ್ಲಿ ನೆನೆಗುದಿಗೆ ಬಿದ್ದಿವೆ.
ಅದೇ ರೀತಿ ಸ್ವತಃ ಬಿಜೆಪಿ ಪಕ್ಷದ ನಾಯಕರೇ ಬೀದಿಯಲ್ಲಿ ಕುಳಿತು ದಕ್ಷ ಹಾಗೂ ಪ್ರಾಮಾಣಿಕ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಸಾವಿನ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿ ನ್ಯಾಯಕ್ಕಾಗಿ ಹೋರಾಟ ಮಾಡಿದ್ದರು.ಆದರೆ ಸಿಬಿಐ ಸಹ ಈ ಪ್ರಕರಣದಲ್ಲಿ ಪ್ರಭಾವಿ ಮಂತ್ರಿಗಳಿಗೆ ಕ್ಲೀನ್ ಚಿಟ್ ನೀಡಿ, ಇದೊಂದು ಆತ್ಮಹತ್ಯೆ!!? ಎಂದು ಷರಾ ಬರೆದು ಬಿಟ್ಟಿತ್ತು.
ಡಿ.ಕೆ.ರವಿ ಅವರಷ್ಟೇ ಅಲ್ಲದೆ ಡಿವೈಎಸ್ಪಿ ಗಣಪತಿ, ಕಲ್ಲಪ್ಪ ಹಂಡಿಬಾಗ್, ಮಲ್ಲಿಕಾರ್ಜುನ ಬಂಡೆ ಮುಂತಾದ ಪೊಲೀಸ್ ಅಧಿಕಾರಿಗಳ ಸಾವುಗಳು ಸಹ ಅನುಮಾನಸ್ಪದವಾಗಿದ್ದು, ಈ ಪ್ರಕರಣಗಳಲ್ಲಿ ರಾಜ್ಯದ ಪ್ರಭಾವಿ ಮಂತ್ರಿಗಳ ಹಾಗೂ ಹಿರಿಯ ಐಪಿಎಸ್, ಐಎಎಸ್ ಅಧಿಕಾರಿಗಳ ಹೆಸರುಗಳು ತಳುಕು ಹಾಕಿಕೊಂಡಿದ್ದವು.
ಈ ಪ್ರಕರಣಗಳ ತನಿಖೆಗಳೂ ಸಹ ಸಿದ್ದರಾಮಯ್ಯನವರ ಆಡಳಿತ ಅವಧಿಯಲ್ಲಿ ಅಸುನೀಗಿ ಮಣ್ಣು ಸೇರಿದ್ದವು. ಈ ಎಲ್ಲಾ ಪ್ರಕರಣಗಳನ್ನು ಅಸ್ತ್ರವನ್ನಾಗಿಸಿಕೊಂಡು ಚುನಾವಣೆ ಗೆದ್ದ ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅಷ್ಟೂ ಪ್ರಕರಣಗಳ ಬಗ್ಗೆ ಜಾಣ ಮೌನ ವಹಿಸಿದೆ. ಇದೆಲ್ಲಾ “ಆಪರೇಷನ್ ಮೂಲಕ ಸರ್ಕಾರ ರಚಿಸಲು ನೆರವಾದವರಿಗೆ ಋಣಸಂದಾಯ” ಮಾಡಲು ನಡೆಸುತ್ತಿರುವ ಪ್ರಹಸನವೇ…!? ಎಂಬ ಅನುಮಾನ ಶುರುವಾಗಿದೆ.
ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳಿಗೆ ಕಿರುಕುಳ, ಒತ್ತಡ, ದೌರ್ಜನ್ಯದಂತಹ ಪ್ರಕರಣಗಳು ಕೇವಲ ಕಾಂಗ್ರೆಸ್ ಕಾಂಗ್ರೆಸ್‌ನಲ್ಲೇ ಎಂದು ಭಾವಿಸಿದ್ದೆವು. ಆದರೆ ಪ್ರಸ್ತುತ ಬಿಜೆಪಿ ಆಡಳಿತ ಅವಧಿಯಲ್ಲಿಯೂ ಇದು ಮುಂದುವರಿದಿದೆ. ಮೈಸೂರಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ದಕ್ಷತೆ ಹಾಗೂ ಪ್ರಾಮಾಣಿಕತೆ ಹಾಗೂ ನಿಷ್ಠುರತೆಗೆ ಹೆಸರಾದವರು. ಅದು ಇಡೀ ರಾಜ್ಯದ ಜನತೆಗೇ ಗೊತ್ತಿದೆ.
ಕೆಲ ಅಧಿಕಾರಿಗಳನ್ನು, ರಾಜಕೀಯ ಪುಜಾರಿಗಳನ್ನು ರಕ್ಷಿಸುವ ಸಲುವಾಗಿ ಒಬ್ಬ ಪ್ರಾಮಾಣಿಕ ಜಿಲ್ಲಾಧಿಕಾರಿಯ ತಲೆದಂಡವಾಗಿದೆ. ಭೂ ಮಾಫಿಯಾ, ಮತ್ತು ಕೋವಿಡ್ ಹೆಸರಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳನ್ನು ಧೈರ್ಯವಾಗಿ ಬಯಲಿಗೆಳೆಯುತ್ತಿರುವ ಪ್ರಾಮಾಣಿಕ ಅಧಿಕಾರಿಯ ವಿರುದ್ಧ ರಾಜಕೀಯ ಪುಢಾರಿಗಳೆಲ್ಲರೂ ಪಕ್ಷಾತೀತವಾಗಿ ಒಂದಾಗಿರುವುದು ಅಚ್ಚರಿ ಮೂಡಿಸಿದೆ.
ಪ್ರಾಮಾಣಿಕ ಅಧಿಕಾರಿಗಳಿಗೆ ಯಾವ ಪಕ್ಷಗಳ ಸರ್ಕಾರ ಬಂದರೂ ರಕ್ಷಣೆ ಇಲ್ಲವೆಂದಾದರೆ, ಪದೇ ಪದೇ ಇಂತಹ ಬೆಳವಣಿಗೆಗಳು ಘಟಿಸುತ್ತಿದ್ದರೆ, ರಾಜ್ಯದ ಜನತೆಗೆ ಹಾಗೂ ಸರ್ಕಾರದ ಸೇವೆ ಸಲ್ಲಿಸಲು ಉತ್ಸುಕತೆಯಿಂದ ನೂರಾರು ಕನಸುಗಳನ್ನು ಕಟ್ಟಿಕೊಂಡು ಬರುವ ಯುವ ಸಮೂಹಕ್ಕೆ ಏನು ಸಂದೇಶ ನೀಡಿದಂತಾಗುತ್ತದೆ!?
ಸಿದ್ಧಾಂತದ ಜೊತೆಗೆ ರಾಜಿ ಮಾಡಿಕೊಂಡು ರಾಜಕೀಯ ನಡೆಸುವುದಾದರೆ, ಅದು ಆತ್ಮವಂಚನೆ ಎನಿಸುವುದಿಲ್ಲವೇ..? ಪಕ್ಷದ ಹಿರಿಯ ನಿಸ್ವಾರ್ಥಿ ನಾಯಕರುಗಳ ಆದರ್ಶಗಳಿಗೆ ಮಸಿ ಬಳಿದಂತಾಗುವುದಿಲ್ಲವೇ!!?
ನಿಮ್ಮ ಮೇಲೆ ಭರವಸೆ ಇಟ್ಟು ತಮ್ಮ ಕುಟುಂಬಗಳನ್ನು ಅನಾಥ ಮಾಡಿಕೊಂಡ, ಬೀದಿಯಲ್ಲಿ ಅನಾಥ ಶವಗಳಾಗಿ ಪ್ರಾಣತ್ಯಾಗ ಮಾಡಿದ ರಾಷ್ಟ್ರಪ್ರೇಮಿ ಹಿಂದೂ ಕಾರ್ಯಕರ್ತರುಗಳ ಆತ್ಮಗಳಿಗೆ ಮೋಸ ಮಾಡಿದಂತಾಗಲಿಲ್ಲವೇ!?
ಈಗಾಗಲೇ ಬೆಲೆಯೇರಿಕೆ,ಕೋವಿಡ್ ಸಂಕಷ್ಟ, ಭ್ರಷ್ಟಾಚಾರ, ಸರ್ಕಾರದ ಮಟ್ಟದಲ್ಲಿಯೇ ನಡೆಯುತ್ತಿರುವ ಕಮಿಷನ್ ದಂಧೆಗಳಿಂದ ಬೇಸತ್ತು, ನಿಮ್ಮ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಿರುವ ಜನತೆಗೆ ನೀವು ಇದಕ್ಕೆಲ್ಲಾ ಉತ್ತರಿಸದಿದ್ದರೆ ಮುಂದೆ ಭವಿಷ್ಯದಲ್ಲಿ ಬಡ್ಡಿ ಸಮೇತ ಬೆಲೆ ತೆರಬೇಕಾಗಲಿದೆ…..!!! @ಜಿ.ಎನ್.ಪ್ರದೀಪ್
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…