ದೊಡ್ಡಬಳ್ಳಾಪುರ: ತಾಲೂಕಿನ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಲು ಸದಾ ಸಿದ್ದನಿದ್ದು, ಶಿಕ್ಷಕರು ತೊಂದರೆ ಉಂಟಾದಲ್ಲಿ ಯಾವುದೇ ಅಳುಕಿಲ್ಲದೆ ನನ್ನ ನೆರವು ಪಡೆಯಬಹುದೆಂದು ಶಾಸಕ ಟಿ.ವೆಂಕಟರಮಣಯ್ಯ ತಿಳಿಸಿದರು.
ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯವತಿಯಿಂದ ನಗರದ ಗುರು ಭವನದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಖಾಸಗಿ ಶಾಲೆಗಳ ಪ್ರಭಾವದಿಂದ ಸರ್ಕಾರಿ ಶಾಲೆಗಳ ಕುರಿತು ಪೋಷಕರಲ್ಲಿ ಅಸಡ್ಡೆ ದೂರಾಗಿಸಲು ಶಿಕ್ಷಕರ ಪಾತ್ರ ಅಪಾರವಾಗಿದ್ದು, ಈ ನಿಟ್ಟಿನಲ್ಲಿ ಶ್ರಮಿಸಬೇಕಿದೆ.ಕಳೆದ ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆಯ ಮುಂದುವರೆದ ಭಾಗವಾಗಿ ಈ ಸರ್ಕಾರ ಸಹ ಸರ್ಕಾರಿ ಶಾಲೆಯಲ್ಲಿ ಎಲ್ ಕೆಜಿ,ಯುಕೆಜಿ ಆರಂಭಿಸುತ್ತಿದ್ದು,ಅದನ್ನು ಸಮರ್ಪಕವಾಗಿ ಬಳಸಿಕೊಂಡು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸಬೇಕೆಂದರು.
ಡಾ.ಸರ್ವಪಲ್ಲಿ ರಾಧಾಕೃಷ್ಣರವರು ಬಡ ಕುಟುಂಬದಲ್ಲಿ ಸೆಪ್ಟಂಬರ್ 5, ರಂದು ಜನ್ಮ ತಳಿದು ಓದಲೇ ಬೇಕು ಎಂಬ ಹಂಬಲದಿಂದ ತಮಗೆ ಬರುವ ವಿದ್ಯಾರ್ಥಿ ವೇತನದಿಂದಲೇ ವ್ಯಾಸಂಗ ಮಾಡುತ್ತಾ ಪ್ರಾಥಮಿಕ ಪ್ರೌಢ ಶಿಕ್ಷಣವನ್ನು ಮುಗಿಸಿದರು. 20ನೇ ವಯಸ್ಸಿನಲ್ಲಿ ದಿ ಎಥಿಕ್ಸ್ ಆಪ್ ವೇದಾಂತ ಎಂಬ ಪ್ರಬಂಧವನ್ನು ಪ್ರಕಟಣೆ ಮಾಡುತ್ತಾರೆ. ದೇಶದ ಮಹಾನ್ ಚೇತನರಾಗಿದ್ದಾರೆ ಇವರ ಆದರ್ಶಗಳನ್ನು ನೋಡಿ ಅದನ್ನು ಪಾಲಿಸುವ ಕರ್ತವ್ಯ ಶಿಕ್ಷಕರದ್ದು ಎಂದರು.
ಉಪವಿಭಾಗಾಧಿಕಾರಿ ಅರುಳ್ ಕುಮಾರ್ ಮಾತನಾಡಿ, ಬ್ರಿಟಿಷರು ಜಾರಿಗೆ ತಂದ ಶಿಕ್ಷಣ ಕ್ಷೇತ್ರ ಅಮೂಲಾಗ್ರ ಬದಲಾವಣೆಯತ್ತಾ ಸಾಗಿದ್ದು,ಆಧುನಿಕತೆ ಬೆಳದಂತೆ ಗೂಗಲ್ ಸಹ ಶಿಕ್ಷಕನಾಗುತ್ತಿದೆ ಆದರೂ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ.ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುತ್ತಿದ್ದು ಆ ನಿಟ್ಟಿನಲ್ಲಿ ಶಿಕ್ಷಕರು ಸನ್ನದ್ದರಾಗಬೇಕಿದೆ.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಈ ವೇಳೆ ತಹಶಿಲ್ದಾರ್ ಟಿ.ಎಸ್.ಶಿವರಾಜ್, ಬಿಇಒ ಬೈಯಪ್ಪರೆಡ್ಡಿ, ಡಿವೈ ಎಸ್ಪಿ ಟಿ.ರಂಗಪ್ಪ,ತಾಪಂ ಸದಸ್ಯೆ ರತ್ನಮ್ಮ ಮತ್ತಿತರಿದ್ದರು.