ದೊಡ್ಡಬಳ್ಳಾಪುರ: ಟೋಲ್ ಗಳಲ್ಲಿ ಸಾಧು ಸಂತರ ಸನ್ಯಾಸಿಗಳ ಮಠಾಧೀಶರ ವಾಹನಗಳಿಗೆ ನಿಶುಲ್ಕ ಪ್ರವೇಶಕ್ಕೆ ಆಗ್ರಹಿಸಿ ಬೆಂಗಳೂರಿನ ರಾಮೋಹಳ್ಳಿಯ ಶ್ರೀ ಸಿದ್ಧಾರೂಢ ಮಿಷನ್ ಆಶ್ರಮದ ಅಧ್ಯಕ್ಷ ಡಾ. ಆರೂಢಭಾರತೀ ಸ್ವಾಮೀಜಿ ಇಂದು ದಿಗಂಬರರಾಗಿ ಪ್ರತಿಭಟನೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರಿನಿಂದ ಗೌರಿಬಿದನೂರಿಗೆ ಪ್ರಯಾಣಿಸಿದ ಸ್ವಾಮೀಜಿಯವರ ವಾಹನಕ್ಕೆ ತಿಪ್ಪಗಾನಹಳ್ಳಿ ಟೋಲ್ ನಲ್ಲಿ ನಿಶುಲ್ಕ ಪ್ರವೇಶಕ್ಕೆ ತಡೆಹಿಡಿಯಲಾಗಿದೆ.ಈ ವೇಳೆ ಸ್ವಾಮೀಜಿ ಕಾರ್ ಇಳಿದು ಅಕ್ಷರಶಃ ದಿಗಂಬರರಾಗಿ ರಸ್ತೆಯಲ್ಲಿ ಧ್ಯಾನಕ್ಕೆ ಕುಳಿತು ಪ್ರತಿಭಟಿಸಿದರು.ಸ್ಥಳಕ್ಕೆ ಧಾವಿಸಿದ ಟೋಲ್ ಅಧಿಕಾರಿ ಸ್ವಾಮೀಜಿ ವಾಹನಕ್ಕೆ ನಿಶುಲ್ಕ ಪ್ರವೇಶ ನೀಡಿ, ಪ್ರಯಾಣ ಮುಂದುವರೆಸಲು ಕೋರಿದಾಗ ಸ್ವಾಮೀಜಿ ಪ್ರತಿಭಟನೆ ನಿಲ್ಲಿಸಿ ಮುಂದಕ್ಕೆ ಪ್ರಯಾಣಿಸಿದರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಸ್ವಾಮೀಜಿ “ದೇಶ ಹಾಗೂ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿದ್ದು,ಹಿಂದೂ ರಾಷ್ಟ್ರದ ಪರಿಕಲ್ಪನೆ ಇರುವಾಗ,ನರೇಂದ್ರ ಮೋದಿಯವರು ಪ್ರಧಾನಿಯಾಗಿರುವಾಗ ಸನ್ಯಾಸಿಯೊಬ್ಬರು ಹೀಗೆ ಪ್ರತಿಭಟಿಸುವಂಥ ಸನ್ನಿವೇಶ ಉಂಟಾದದ್ದು ದುರಾದೃಷ್ಟ.ಕೇಂದ್ರ ಸರ್ಕಾರದ ಸಾರಿಗೆ ಮತ್ತು ರಸ್ತೆ ಹೆದ್ದಾರಿ ಪ್ರಾಧಿಕಾರವು 34 ವಾಹನಗಳಿಗೆ ಟೋಲ್ ಗಳಲ್ಲಿ ನಿಶುಲ್ಕ ಪ್ರವೇಶಕ್ಕೆ ಅನುಮತಿ ನೀಡಿದೆ. ಈ ಪಟ್ಟಿಯನ್ನು ಪರಿಷ್ಕರಿಸಿ ಸಾಧು ಸಂತ ಮಠಾಧೀಶರ ವಾಹನಳಿಗೂ ನಿಶುಲ್ಕ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಈ ಮುಂಚೆಯು ಸಹ ಇದೇ ಸ್ವಾಮೀಜಿಯವರು ವಿಜಯಪುರದಿಂದ ಬೆಂಗಳೂರಿಗೆ ಪ್ರಯಾಣಿಸಿದಾಗ 3 ಕಡೆ ಟೋಲ್ ಗಳಲ್ಲಿ ವಾಹನವನ್ನು ತಡೆದಾಗಲು ದಿಗಂಬರರಾಗಿ ರಸ್ತೆಯಲ್ಲಿ ಧ್ಯಾನಕ್ಕೆ ಕುಳಿತು ಪ್ರತಿಭಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.