ಹಾವೇರಿ: ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹ ಪರಿಸ್ಥಿತಿಯಿಂದ ಉಂಟಾಗುವ ಪರಿಸ್ಥಿತಿಯನ್ನು ನಿಭಾಯಿಸಲು ಜಿಲ್ಲಾಡಳಿತದೊಂದಿಗೆ ಸಹಕರಿಸಲು ಜಿಲ್ಲೆಗೆ ಅಗ್ನಿಶಾಮಕ ದಳ ಹಾಗೂ ಎಸ್.ಡಿ.ಆರ್.ಎಫ್ ತಂಡವನ್ನು ಸರ್ಕಾರದಿಂದ ಜಿಲ್ಲೆಗೆ ನಿಯೋಜಿಸಲಾಗುವುದು ಹಾಗೂ ಮಳೆಹಾನಿ ಹಾಗೂ ನೆರೆಹಾನಿಯ ಪರಿಹಾರ ಕಾರ್ಯಗಳಿಗಾಗಿ ರೂ.10 ಕೋಟಿ ತುರ್ತು ಹಣವನ್ನು ಜಿಲ್ಲೆಗೆ ಬಿಡುಗಡೆಮಾಡಲಾಗಿದೆ ಎಂದು ಗೃಹ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು,ಈಗಾಗಲೇ ಜಿಲ್ಲಾಡಳಿತ ಬಳಿ ವಿಪತ್ತು ನಿರ್ವಹಣೆಗಾಗಿ ರೂ.6.24 ಕೋಟಿ ಹಣವಿದೆ. ಇಂದು ರೂ.5 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಸರ್ಕಾರ ಇನ್ನೂ ರೂ.5 ಕೋಟಿ ಹಣ ಬಿಡುಗಡೆ ಮಾಡಲಿದೆ. ಅಗತ್ಯವಿದ್ದರೆ ಮತ್ತಷ್ಟು ಅನುದಾನವನ್ನು ಒದಗಿಸಲಾಗುವುದು. ನೆರೆ ನಿರ್ವಹಣೆಗೆ ಯಾವುದೇ ಹಣಕಾಸಿನ ತೊಂದರೆಯಾಗದಂತೆ ಕ್ರಮವಹಿಸಲಾಗುವುದು ಎಂದು ಹೇಳಿದರು.
ವಾಡಿಕೆ ಮಳೆಗಿಂತ ಆಗಸ್ಟ್ ಮೊದಲ ವಾರದಲ್ಲಿ ಹೆಚ್ಚಾಗಿ ಮಳೆಯ ಜೊತೆಗೆ ರಭಸದಗಾಳಿ ಬಿಸಿ ಬೆಳೆಗಳಿಗೆ ಹಾನಿಯಾಗಿದೆ. ಕೆಲವೆಡೆ ಮನೆಗಳು ಕುಸಿದಿವೆ. ವರದಾ ನದಿಯ ಹರಿಯು ಹೆಚ್ಚಾಗಿ ನದಿ ಪಾತ್ರದ ಹಾವೇರಿ, ಹಾನಗಲ್, ಸವಣೂರ ತಾಲೂಕಿನ ಹಳ್ಳಿಗಳಿಗೆ ಕೆಲ ಜಮೀನುಗಳಿಗೆ ನೀರು ನುಗ್ಗಿ ಹಾನಿಯುಂಟಾಗಿದೆ. ಮನೆ ಹಾನಿ ಕುರಿತು ತಹಶೀಲ್ದಾರಗಳಿಗೆ ಹಾಗೂ ಬೆಳೆಹಾನಿ ಕುರಿತಂತೆ ಪ್ರಾಥಮಿಕ ಸರ್ವೇಗೆ ಕೃಷಿ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಕಳೆದ ಬಾರಿಯ ಪ್ರವಾಹದ ಆಧಾರದ ಮೇಲೆ ತುಂಗಭದ್ರ, ವರದಾ, ಧರ್ಮಾ ನದಿ ಪಾತ್ರದ ಹಳ್ಳಿಗಳು ಸೇರಿದಂತೆ ಮಳೆ ಹಾಗೂ ನೆರೆಯಿಂದ ತೊಂದರೆಗೆ ಸಿಲುಕಬಹುದಾದ 144 ಹಳ್ಳಿಗಳನ್ನು ಗುರುತಿಸಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಈ ಗ್ರಾಮಗಳ ಜನ, ಜಾನುವಾರುಗಳ ರಕ್ಷಣೆಗೆ ಎಲ್ಲ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಅಗತ್ಯಬಿದ್ದರೆ ಸ್ಥಳಾಂತಗೊಳಿಸಿ ತಾತ್ಕಾಲಿಕ ಕಾಳಜಿ ಕೇಂದ್ರದಲ್ಲಿ ಇರಿಸಿ ರಕ್ಷಣೆ ಮಾಡಲು ಜಿಲ್ಲಾಡಳಿತದ ತಂಡ ಸಜ್ಜಾಗಿದೆ. ಈ ಕುರಿತಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಮಳೆಯಿಂದ ಹಾನಿಯಾದ ಬೆಳೆಗಳ ಪ್ರಾಥಮಿಕ ಸರ್ವೇ ಜೊತೆಗೆ ಮಣ್ಣು ಕೊಚ್ಚಿಹೋಗಿ ಭೂಮಿ ಹಾಳಾದ ಕುರಿತಂತೆ ಎರಡು ಮಾದರಿಯಲ್ಲಿ ಸರ್ವೇ ನಡೆಸಲು ಕೃಷಿ ಇಲಾಖೆಗೆ ಸೂಚಿಸಲಾಗಿದೆ. ಅತೀವೃಷ್ಟಿಯಿಂದ ತೊಂದರೆಗೊಳಗಾದ ಕುಟುಂಬಗಳಿಗೆ ಒಂದು ತಿಂಗಳ ಪಡಿತರ ನೀಡಲು ಸೂಚನೆ ನೀಡಲಾಗಿದೆ. ಪ್ರತಿ ತಾಲೂಕಿಗೆ ಜಿಲ್ಲಾ ಮಟ್ಟದ ಓರ್ವ ಅಧಿಕಾರಿಗಳನ್ನು ತಾಲೂಕಾ ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಿ ಪ್ರವಾಹ ನಿಯಂತ್ರಣ ಹಾಗೂ ಸಂತ್ರಸ್ತರ ರಕ್ಷಣೆಗೆ ಪುನರ್ವಸತಿ ಕಾರ್ಯಗಳ ಮೇಲ್ವಿಚಾರಣೆಗೆ ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್ ಹಾಗೂ ಲೋಕೋಪಯೋಗಿ ಇಲಾಖೆಯ ರಸ್ತೆಗಳು ಮಳೆಯಿಂದ ಹಾನಿಯಾದ ಕುರಿತಂತೆ ಸರ್ವೇಮಾಡಿ ವರದಿ ಸಲ್ಲಿಸಲು ಸೂಚಿಸಲಾಗಿದೆ. ಸಣ್ಣ ನೀರಾವರಿ ಮತ್ತು ಜಿಲ್ಲಾ ಪಂಚಾಯತ್ ಕೆರೆಗಳ ಬಂಡುಗಳನ್ನು ಸರ್ವೇಮಾಡಿ ಶಿಥಿಲಗೊಂಡಿರುವ ಬಂಡಗಳನ್ನು ಭದ್ರಪಡಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಉಗ್ರಾಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ಸಂಸದ ಶಿವಕುಮಾರ ಉದಾಸಿ, ಶಾಸಕರಾದ ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿ ರಮೇಶ ದೇಸಾಯಿ ಇತರರು ಉಪಸ್ಥಿತರಿದ್ದರು.