ದೊಡ್ಡಬಳ್ಳಾಪುರ: ಗೌರವಧನವನ್ನು 12.000ಕ್ಕೆ ಹೆಚ್ಚಿಸುವಂತೆ ಖಾತರಿ ಹಾಗೂ ಕೋವಿಡ್-19 ವಿರುದ್ದ ಹೋರಾಟಕ್ಕೆ ಅಗತ್ಯವಿರುವಷ್ಟು ಸಂರಕ್ಷಣಾ ಸಾಮಾಗ್ರಿಗಳನ್ನು ನೀಡುವುದು.ಕೋವಿಡ್-19ಗೆ ತುತ್ತಾದ ಆಶಾಗೆ ಪರಿಹಾರ,ಸಂಪೂರ್ಣ ಉಚಿತ ಚಿಕಿತ್ಸೆ ನೀಡಬೇಕೆಂದು ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ನಗರದ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಆಶಾ ಕಾರ್ಯಕರ್ತೆಯರು,ರಾಜ್ಯಾದ್ಯಂತ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜುಲೈ 10ರಿಂದ ಆರೋಗ್ಯ ಸೇವೆ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿದ್ದಾರೆ.ಕಳೆದ 19ದಿನಗಳಿಂದ ತಾಲೂಕು, ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ, ತಹಶಿಲ್ದಾರ್ ಸೇರಿದಂತೆ ರಾಜ್ಯದ ಸಚಿವರು,ಮತ್ತು ಶಾಸಕರಿಗೆ ಖುದ್ದಾಗಿ ಮನವಿ ಸಲ್ಲಿಸಿ ಬೇಡಿಕೆಗಳ ಈಡೇರಿಕೆ ಒತ್ತಾಯಿಸಲಾಗುತ್ತಿದೆ.ಅಲ್ಲದೆ ಕಳೆದ ಜನವರಿ ತಿಂಗಳಿನಿಂದ ಸರ್ಕಾರಕ್ಕೆ ಹತ್ತು ಮನವಿ ಪತ್ರಗಳನ್ನು ಸಲ್ಲಿಸಲಾಗಿದೆಯಾದರು ಸರ್ಕಾರ ನಮ್ಮ ಬೇಡಿಕೆ ಈಡೇರಿಸುತ್ತಿಲ್ಲ.
ಸಚಿವ ಸುಧಾಕರ್ ಅವರು ಎರಡು ಮೂರು ದಿನಗಳಲ್ಲಿ ಸರ್ಕಾರದ ಕ್ರಮ ತಿಳಿಸುವುದಾಗಿ ಹೇಳಿದ್ದರು,ಆದರೆ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ಬರದೆ ಪ್ರತಿಭಟನೆ 19ನೇ ದಿನಕ್ಕೆ ಕಾಲಿಟ್ಟಿದೆ ಎಂದು ಅಳಲು ತೋಡಿಕೊಂಡರು.
ತಾಪಂ ಅಧ್ಯಕ್ಷ ಡಿ.ಸಿ.ಶಶಿಧರ್ ಮಾತನಾಡಿ,ಕರೊನಾ ನಿರ್ವಹಣೆಯಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಅಪಾರವಾಗಿದ್ದು,ಸರ್ಕಾರ ಇವರ ಬೇಡಿಕೆಗಳನ್ನು ಈಡೇರಿಸಬೇಕಾಗಿರುವುದು ನ್ಯಾಯಸಮ್ಮತ,ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಬೇಡಿಕೆ ಈಡೇರಿಸಬೇಕಿದೆ ಎಂದು ಒತ್ತಾಯಿಸಿ.
ಈ ವೇಳೆ ಮನವಿ ಪತ್ರವನ್ನು ತಾಲೂಕು ವೈದ್ಯಾಧಿಕಾರಿ ಪರವಾಗಿ ಡಾ.ಅರುಣ್ ಕುಮಾರ್ ಸ್ವೀಕರಿಸಿದರು.