ಬೆಂಗಳೂರು: Covid19 ಪರಿಕರಗಳ ಖರೀದಿ ಅಕ್ರಮದ ಬಗೆಗಿನ ಅತ್ಯಂತ ಹಳೇ ರಾಷ್ಟ್ರೀಯ ಪಕ್ಷವೊಂದರ ಆರೋಪ, ಅದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಪ್ರತ್ಯಾರೋಪ, ಕಸರೆರಚಾಟವನ್ನು ಗಮನಿಸಿದೆ.ಕೋವಿಡ್ ಈ ರಾಜ್ಯದ ಪ್ರತಿಯೊಬ್ಬನ ಜೀವ, ಜೀವನಕ್ಕೆ ಬೆದರಿಕೆಯೊಡ್ಡಿರುವಾಗ, ಬದುಕನ್ನೇ ಕಸಿಯುತ್ತಿರುವಾಗ ಎರಡೂ ಪಕ್ಷಗಳ ಬೇಜವಾಬ್ದಾರಿ ವರ್ತನೆ ಬೇಸರ ತರಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟ್ವಿಟ್ ಮಾಡಿದ್ದಾರೆ.
Covid ಪರಿಕರಗಳ ಖರೀದಿಯಲ್ಲಿ ಅಕ್ರಮವೆಸಗಿರುವುದು ನಿಜವೇ ಆಗಿದ್ದರೆ, ಅದು ಆಡಳಿತ ಪಕ್ಷದ ನೈತಿಕತೆಯೇ ಇಲ್ಲದ, ಮನುಷ್ಯತ್ವ ಹೀನ ಕೃತ್ಯವೇ ಸರಿ. ಕೇವಲ ಸುದ್ದಿಯಲ್ಲಿರಬೇಕು ಎಂಬ ಕಾರಣಕ್ಕೆ ಹಳೇ ರಾಷ್ಟ್ರೀಯ ಪಕ್ಷ ಮತ್ತು ಅದರ ನಾಯಕರು ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದರೆ ಅದು ಆ ನಾಯಕರ ರಾಜಕೀಯ ದಾಹದ ಪ್ರತೀಕ ಎಂದು ಕುಟುಕಿದ್ದಾರೆ.
ಹಳೇ ಪಕ್ಷ ಮತ್ತು ಆಡಳಿತಾರೂಢ ಪಕ್ಷಗಳು ಮೊದಲು ಕೆಸರೆರಚಾಟ ನಿಲ್ಲಿಸಬೇಕು. ನಮ್ಮ ಆದ್ಯತೆ ಜನರ ಜೀವ ಮತ್ತು ಜೀವನವಾಗಬೇಕು. ಮುಖ್ಯಮಂತ್ರಿಗಳು ಈ ಬಗ್ಗೆ ಸೂಕ್ತ ಸ್ಪಷ್ಟನೆ ನೀಡಿ, ಪರಿಣಾಮಕಾರಿಯಾಗಿ ಕೋವಿಡ್ ಅನ್ನು ನಿಗ್ರಹಿಸುವತ್ತ ಗಮನಹರಿಸಬೇಕು. ಕೋವಿಡ್ ನಿಗ್ರಹಿಸುವುದಕ್ಕೆ ನಮ್ಮ ಬೆಂಬಲ.ನಿಮ್ಮ ಕ್ಷುಲ್ಲಕ ನಡವಳಿಕೆಗಳಿಗಲ್ಲ ಎಂದಿದ್ದಾರೆ.