ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರ ಕೋವಿಡ್-19 ಲಾಕ್ಡೌನ್ ಸಂಕಷ್ಟದಲ್ಲಿರುವ ವಕೀಲ ಸಮುದಾಯಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮೊತ್ತವನ್ನು ಹೆಚ್ಚಿಸುವಂತೆ ಆಗ್ರಹಿಸಿ ತಾಲ್ಲೂಕು ವಕೀಲರ ಸಂಘದಿಂದ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ರಾ.ಬೈರೇಗೌಡ, ರಾಜ್ಯದ ವಕೀಲರಿಗೆ ₹50 ಕೋಟಿ ನೀಡುವಂತೆ ಮನವಿ ಮಾಡಲಾಗಿತ್ತು. ಆದರೆ ರಾಜ್ಯ ಸರ್ಕಾರ ವಕೀಲರ ಪರಿಷತ್ಗೆ ನೀಡಿರುವುದು ಕೇವಲ ₹5 ಕೋಟಿ ಮಾತ್ರ. ರಾಜ್ಯದಲ್ಲಿ 1 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಕೀಲರು ವೃತ್ತಿಯಲ್ಲಿ ತೊಡಗಿದ್ದಾರೆ. ಹೀಗಾಗಿ ವಕೀಲರ ಸಂಘದ ಬೇಡಿಕೆಯಂತೆ ಹೆಚ್ಚಿನ ಅನುದಾನವನ್ನು ನೀಡಬೇಕು ಎಂದರು.
ರಾಜ್ಯದ ಎಲ್ಲಾ ವಕೀಲರಿಗೆ ಕೇಂದ್ರ ಸರ್ಕಾರವು ರಾಷ್ಟ್ರೀಕೃತ ಬ್ಯಾಂಕ್ಗಳ ಮೂಲಕ ₹5 ಲಕ್ಷದವರೆಗೆ ಬಡ್ಡಿ ರಹಿತ ಸಾಲ ನೀಡುವಂತೆ ನಿರ್ದೇಶನ ನೀಡಬೇಕು. ಕೇಂದ್ರ ಸರ್ಕಾರ ವಕೀಲ ಸಮುದಾಯಕ್ಕೆ ಆರೋಗ್ಯ ವಿಮೆ ನೀಡುವುದಾಗಿ ಘೋಷಿಸಿತ್ತು. ಎಲ್ಲಾ ವಕೀಲರಿಗೆ ಆರೋಗ್ಯ ವಿಮೆಯನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ವಕೀಲರ ಕಲ್ಯಾಣ ನಿಧಿಯ ಕಲಂ 16ಕ್ಕೆ ಸೂಕ್ತ ತಿದ್ದುಪಡಿ ತಂದು ವಕೀಲ ಸಮುದಾಯಕ್ಕೆ ಆರ್ಥಿಕ ಸಹಾಯ ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ವಕೀಲರಾದ ಎ.ಕೃಷ್ಣಮೂರ್ತಿ, ಚನ್ನೇಗೌಡ, ಆಂಜನಗೌಡ, ಬಿ.ಎಂ.ಬೈರೇಗೌಡ, ಎಂ.ಆರ್.ಸುರೇಶ್, ಎನ್.ಶಶಿಕುಮಾರ್,ಬಿ.ಎನ್.ನಾಗರಾಜಗೌಡ, ಡಿ.ನಟರಾಜ್ ಮತ್ತಿತರಿದ್ದರು.