ದೊಡ್ಡಬಳ್ಳಾಪುರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳು ಸಾರ್ವಜನಿಕರೊಂದಿಗೆ ಮಾತನಾಡುವಾಗ ಜವಾಬ್ದಾರಿಯುತವಾಗಿ ಮಾತನಾಡಬೇಕು.ಇತ್ತೀಚೆಗೆ ಸಚಿವ ಮಾಧುಸ್ವಾಮಿ, ಶಾಸಕ ಟಿ.ವೆಂಕಟರಮಣಯ್ಯ ಅವರು ಮಾತನಾಡಿರುವ ರೀತಿ ಸರಿಯಾದ ಕ್ರಮ ಅಲ್ಲ ಎಂದು ಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಹೇಳಿದರು.
ಅವರು ನಗರದ ನಂಜುಂಡೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ವಿದೇಶದಿಂದ ಬರುವವರನ್ನು ದೊಡ್ಡಬಳ್ಳಾಪುರದಲ್ಲಿ ಕ್ವಾರಂಟೈನ್ ಮಾಡುವ ವಿಚಾರದಲ್ಲಿ ವಕೀಲರಾದ ಜಿ.ವೆಂಕಟೇಶ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಜನರಿಗೆ ಒಳಿತಾಗುವಂತೆ ಮಾಡಿದ್ದಾರೆ.ಆದರೆ ಈ ವಿಚಾರದಲ್ಲಿ ಕ್ಷೇತ್ರದ ಶಾಸಕರು ವೆಂಕಟೇಶ್ ಅವರನ್ನು ಅವಾಚ್ಚಶಬ್ದಗಳಿಂದ ನಿಂದಿಸಿ, ಪ್ರಾಣಬೆದರಿಕೆ ಹಾಕಿದ್ದಾರೆ. ಈ ವಿಚಾರವಾಗಿ ವಿಧಾನ ಸಭಾ ಅಧ್ಯಕ್ಷರಿಗೆ ದೂರು ಸಲ್ಲಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.ಜನ ಸಾಮಾನ್ಯರ ಹಕ್ಕುಗಳನ್ನು ರಕ್ಷಿಸಬೇಕಾದವರೇ ಅಗೌರವ ರೀತಿಯಲ್ಲಿ ನಡೆದುಕೊಂಡಿದ್ದಾರೆ.ವಿಧಾನಸಭಾ ಅಧ್ಯಕ್ಷರು ಕ್ರಮ ಕೈಗೊಳ್ಳದಿದ್ದರೆ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗುವುದು ಎಂದರು.
ವಕೀಲರಾದ ಜಿ.ವೆಂಕಟೇಶ್ ವಿರುದ್ದ ಸಾಕಷ್ಟು ಜನ ಪೊಲೀಸ್ ಠಾಣೆಗೆ ದೂರುಗಳನ್ನು ನೀಡಿದ್ದಾರೆ ಎನ್ನಲಾಗುತ್ತಿದೆ. ಈ ದೂರುಗಳು ಗಂಭೀರವಾಗಿದ್ದರೆ ವೆಂಕಟೇಶ್ ವಿರುದ್ಧವಾಗಿ ಅನ್ಯಾಯಕ್ಕೆ ಒಳಗಾದವರ ಪರವಾಗಿಯು ನಿಲ್ಲಲಾಗುವುದು. ವಕೀಲರಾದ ಜಿ.ವೆಂಕಟೇಶ್ ಅವರಿಗೆ ನಮ್ಮ ಪಕ್ಷದಲ್ಲಿ ಇನ್ನು ಯಾವುದೇ ಹುದ್ದೆಯನ್ನು ನೀಡಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ.ಅಬ್ದುಲ್ ಸುಬಾನ್,ಆನಂದ್, ವಕೀಲ ಜಿ.ವೆಂಕಟೇಶ್ ಇದ್ದರು