ಗೌರಿಬಿದನೂರು: ತಾಲೂಕಿನ ಹೊಸೂರು ಹೋಬಳಿಯ ಸೋಮಶೆಟ್ಟಿಹಳ್ಳಿಯಲ್ಲಿ (Somashettyhalli) ನಾಳೆಯಿಂದ ಶ್ರೀ ಲಕ್ಕಮ್ಮ ಶ್ರೀ ಬೀರಲಿಂಗೇಶ್ವರಸ್ವಾಮಿ ದೊಡ್ಡದೇವರ ಜಾತ್ರಾ ಮಹೋತ್ಸವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಶ್ರೀ ಹಾಲುಮತ ಸಾಮಂತ ಕುರುಬ ಕುಲಬಾಂಧವರ ಕುಲದೇವರಾದ ಶ್ರೀ ಲಕ್ಕಮ್ಮ ಶ್ರೀ ಬೀರಲಿಂಗೇಶ್ವರಸ್ವಾಮಿ ದೊಡ್ಡದೇವರ ಜಾತ್ರೆ ಏ.13 ಮತ್ತು 14 ಎರಡು ದಿನಗಳು ನಡೆಯುತ್ತದೆ.
ಜಾತ್ರಾ ಮಹೋತ್ಸವಕ್ಕೆ ಶ್ರೀ ಹಾಲುಮತ ಸಾಮಂತ ಕುಲಗುರುಗಳಾದ ಶಂಕರ್‌ನಾರಾಯಣ್ ಒಡೆಯರ್ ಚಾಲನೆ ನೀಡಲಿದ್ದಾರೆ.
ಜಾತ್ರಾ ಮಹೋತ್ಸವದ ಅಂಗವಾಗಿ ಏ.13 ರಂದು “ನಾಗರ ಪೂಜೆ, ಗಂಗೆ ಪೂಜೆ, ದೇವಾಲಯ ಪ್ರವೇಶ ” ಬೀಗರ ದೇವರ ಎದುರುಗೊಳಿಸುವುದು ಹಾಗೂ ರಾತ್ರಿ ಕಲಾತಂಡಗಳೊಂದಿಗೆ ದೇವರುಗಳ ವಿಜೃಂಬಣೆಯ ಮೆರವಣಿಗೆ ನಡೆಸಲಾಗುತ್ತಿದೆ.
ಏ.14 ರಂದು ಜಲಧಿ ಪೂಜೆ (101 ಎಡೆ ಪೂಜೆ) ಮತ್ತು ಗೊರವರಿಂದ ದೇವರುಗಳಿಗೆ ಹೊಗಳಿಕೆ, ನಂತರ ಗೊರವರಿಗೆ ಹಾಲುಣಿಸುವುದು, ವೀರಗಾಸೆಯವರಿಂದ ಕುಣಿತ, ವಸ್ತ್ರ ವಿತರಣೆ, ಪ್ರಸಾದ ವಿನಿಯೋಗ ಆಯೋಜಿಸಲಾಗಿದೆ.