ಬೆಂಗಳೂರು; ರಾಜ್ಯ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ವಿರುದ್ಧ, ಶಾಸಕರ ಅಮಾನತು ವಿಚಾರದಲ್ಲಿ ಪ್ರತಿಪಕ್ಷ ಬಿಜೆಪಿ (BJP) ಏಕಾಂಗಿಯಾಗಿ ಪ್ರತಿಭಟನೆಗಳನ್ನು ನಡೆಸುತ್ತಿರುವುದು ಮಿತ್ರ ಪಕ್ಷ ಜೆಡಿಎಸ್ (JDS) ಪಾಳೆಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಈ ರೀತಿಯ ನಡೆಯಿಂದ ಮುಂದಿನ ದಿನಗಳಲ್ಲಿ ಪೆಟ್ಟು ಬೀಳಲಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು ಬಹಿರಂಗವಾಗಿಯೇ ಎಚ್ಚರಿಕೆ ನೀಡಿದ್ದಾರೆ.
ಅಧಿವೇಶನದಲ್ಲಿ ಬಿಜೆಪಿ ಬಾವಿಗಿಳಿದು ಧರಣಿ ನಡೆಸಿದಾಗ, ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಿದಾಗ ಜೆಡಿಎಸ್ ಬೆಂಬಲ ವ್ಯಕ್ತಪಡಿಸಿತ್ತು. ಆದರೆ, ನಂತರದಲ್ಲಿ ಬಿಜೆಪಿ ಏಕಾಂಗಿ ಪ್ರತಿಭಟನೆಗಳನ್ನು ನಡೆಸಿದ್ದು, ಜೆಡಿಎಸ್ ಅನ್ನು ಯಾವುದಕ್ಕೂ ಆಹ್ವಾನಿಸಿಲ್ಲ.
ಜೆಡಿಎಸ್ ಬೆಂಬಲ ಕೋರದೆ ಬಿಜೆಪಿ ಏಕಾಂಗಿಯಾಗಿ ಸರ್ಕಾರ ವಿರುದ್ದ ಬೀದಿಗಿಳಿಯುತ್ತಿದೆ.
ಸರ್ಕಾರದ ಬೆಲೆ ಏರಿಕೆ ಧೋರಣೆ ಖಂಡಿಸಿ ಬಿಜೆಪಿ ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಧರಣಿ ನಡೆಸಿದರೂ ಜೆಡಿಎಸ್‌ಗೆ ಆಹ್ವಾನ ನೀಡಿಲ್ಲ. ಅಲ್ಲದೆ, ಬಿಜೆಪಿ ಶಾಸಕರ ಅಮಾನತು ವಿರೋಧಿಸಿ ಸಭಾಧ್ಯಕ್ಷರಿಗೆ ಮನವಿ ಸಲ್ಲಿಸುವ ವೇಳೆಯೂ ಜೆಡಿಎಸ್‌ಗೆ ಮಾಹಿತಿ ನೀಡಲಿಲ್ಲ. ಇದು ಜೆಡಿಎಸ್ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ. ಬಿಜೆಪಿ ನಡೆಗೆ ಜೆಡಿಎಸ್‌ನಲ್ಲಿ ಬೇಸರ ಮೂಡಿದೆ.
ಧರಣಿಗೆ ಆಹ್ವಾನ ನೀಡಿಲ್ಲ
ಈ ಕುರಿತು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್ ಬಾಬು, ಬಿಜೆಪಿಯವರು ನಡೆಸುತ್ತಿರುವ ಧರಣಿ ಸಂಬಂಧ ನಮಗೆ ಯಾವುದೇ ಆಹ್ವಾನ ಕೊಟ್ಟಿಲ್ಲ ಎಂದಿದ್ದಾರೆ.
ಎನ್‌ಡಿಎ ಭಾಗವಾಗಿರುವ ಎರಡೂ ಪಕ್ಷಗಳ ನಡುವೆ ಸಮನ್ವಯ ಇರಬೇಕು. ಆಗ ಮಾತ್ರ ಹೋರಾಟ, ಕಾರ್ಯಕ್ರಮಗಳು ಯಶಸ್ವಿಯಾಗಲಿವೆ. ಬಿಜೆಪಿಯವರಿಗೆ ತಮ್ಮದು ರಾಷ್ಟ್ರೀಯ ಪಕ್ಷವಾಗಿದ್ದು, ಸ್ಥಳೀಯ ಪಕ್ಷವನ್ನು ಯಾಕೆ ಕೇಳಬೇಕು ಎಂಬ ಮನೋಭಾವ ಇದ್ದರೆ ಅದು ತಪ್ಪು. ಈ ರೀತಿಯ ನಡೆಯಿಂದ ಮುಂದಿನ ದಿನದಲ್ಲಿ ಪೆಟ್ಟು ಬೀಳಲಿದೆ ಎಂದು ಎಚ್ಚರಿಕೆ ನೀಡಿದರು.
ಸದನದಲ್ಲಿ ಸರ್ಕಾರದ ವಿರುದ್ಧದ ಹೋರಾಟಕ್ಕೆ ಬಿಜೆಪಿ ಜತೆ ಎಲ್ಲಾ ರೀತಿಯಲ್ಲೂ ಕೈ ಜೋಡಿಸಲಾಗಿತ್ತು. ಆದರೂ ಬಿಜೆಪಿ ನಡೆಸುತ್ತಿರುವ ಧರಣಿಗೆ ಆಹ್ವಾನ ನೀಡುತ್ತಿಲ್ಲ. ಇದೇ ತಿಂಗಳು 7 ರಿಂದ ಜನಾಕ್ರೋಶ ನಡೆಸುತ್ತಿದ್ದು, ಅದರ ಬಗ್ಗೆಯೂ ಚರ್ಚೆ ನಡೆಸಿಲ್ಲ.
ಸರ್ಕಾರ ವಿರುದ್ಧ ಒಟ್ಟಿಗೆ ಪ್ರತಿಭಟನೆ ನಡೆಸಿದರೆ ಜನತೆಗೆ ಮತ್ತಷ್ಟು ಜಾಗೃತಿ ಮೂಡಿಸಲು ಸಾಧ್ಯ. ಆದರೆ, ಜೆಡಿಎಸ್ ಅನ್ನು ಯಾವುದೇ ಪ್ರತಿಭಟನೆಗೆ ಆಹ್ವಾನ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.