ಬೆಂಗಳೂರು: ಗಗನಮುಖಿಯಾಗಿದ್ದ ಬೇಳೆಕಾಳುಗಳ ಬೆಲೆ ದಿಢೀರ್ ಕುಸಿತವಾಗುತ್ತಿದ್ದು, ತೊಗರಿ ಬೇಳೆ (Dhal) ಕೆ.ಜಿ.ಗೆ 30ರಿಂದ 40 ರೂ. ಇಳಿಮುಖವಾಗಿದೆ.
ತೊಗರಿಬೇಳೆ ಮಾತ್ರವಲ್ಲದೆ, ಕಡಲೆಬೇಳೆ, ಬಟಾಣಿ, ಗೋಧಿ ಸೇರಿದಂತೆ ಹಲವು ಆಹಾರ ಧಾನ್ಯಗಳ ಬೆಲೆ ಕಡಿಮೆ ಆಗಿದೆ. ಇದರಿಂದ ಬೆಲೆ ಏರಿಕೆಯ ಬಿಸಿಯಿಂದ ಕಂಗಾಲಾಗಿದ್ದ ಜನತೆ ಕೊಂಚ ನಿರಾಳವಾಗುವಂತಾಗಿದೆ.
ತೊಗರಿಬೇಳೆ ಕಳೆದ ವರ್ಷದ ಅಂತ್ಯದಲ್ಲಿ 200 ರೂ. ಗಿಂತ ಹೆಚ್ಚು ಬೆಲೆಯಾಗಿತ್ತು. ಈ ಬಾರಿ ಕರ್ನಾಟಕ ಮಾತ್ರವಲ್ಲದೆ ಪಕ್ಕದ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶದಲ್ಲಿ ತೊಗರಿ ಫಸಲು ಉತ್ತಮವಾಗಿ ಬಂದಿದೆ. ಇದರಿಂದ ತೊಗರಿಬೇಳೆ ಇಳಿಮುಖವಾಗಲು ಕಾರಣ ಎಂದು ವ್ಯಾಪಾರಿಗಳು ಹೇಳಿದ್ದಾರೆ.
ಯಶವಂತಪುರ ಎಪಿಎಂಸಿಗೆ ಪ್ರತಿದಿನ 150-200 ಟನ್‌ನಷ್ಟು ಬೇಳೆ ಕಾಳು ತುಂಬಿದ ಲಾರಿಗಳು ಬರುತ್ತಿವೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ತೊಗರಿಬೇಳೆಯ ಸಗಟು ದರ ಕೆ.ಜಿ.ಗೆ 150 ರಿಂದ 175 ರೂ.ಗಳಿಗೆ ಏರಿಕೆಯಾಗಿತ್ತು. ಇದೀಗ ಸಗಟು ದರವು 105-135 ರೂ.ಗೆ ಇಳಿಕೆಯಾಗಿದೆ.
ಕಡಲೆಕಾಳಿನ ದರವೂ 75-80 ರೂ. ನಿಂದ 72 ರೂ.ಗೆ ಇಳಿಕೆಯಾಗಿದೆ. ಬಟಾಣಿ ದರದಲ್ಲಿ ಭಾರಿ ಕುಸಿತ ಕಂಡಿದೆ. ಸಗಟು ದರವು ಕಳೆದ ವರ್ಷ ಕೆ.ಜಿ.ಗೆ 200 ರೂ. ಇತ್ತು. ಈಗ ಕೇವಲ 85 ರೂ.ಗೆ ಇಳಿಕೆಯಾಗಿದೆ.