ದೊಡ್ಡಬಳ್ಳಾಪುರ (Doddaballapura): ನಿನ್ನೆ ಕೆಎಸ್‌ಆರ್‌ಟಿಸಿ (KSRTC) ಬಸ್ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸಾವನಪ್ಪಿರುವ ಘಟನೆ ಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ವಾಬಸಂದ್ರ ಬಳಿ ವರದಿಯಾಗಿತ್ತು.
ಈ ಹಿನ್ನೆಲೆಯಲ್ಲಿ ಇಂದು ಹೊಸಹಳ್ಳಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರಾವ್ ಗಣೇಶ್ ಅವರು ಲೋಕೋಪಯೋಗಿ ಇಲಾಖೆಯ (PWD) ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪುರುಷೋತ್ತಮ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ರಸ್ತೆ ಸುರಕ್ಷತೆ, ತಿರುವು ಸೂಚಿಸುವ ನಾಮಫಲಕ, ಸ್ಟಡ್ಸ್, ಸ್ಟ್ರಿಪ್ಸ್ ಅಳವಡಿಸುವ ಬಗ್ಗೆ ಹಾಗೂ ಸವಾರರಿಗೆ ಸುರಕ್ಷತೆ ಒದಗಿಸುವ ಸಲುವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದ್ದಾರೆ.
ತಾಲೂಕಿನ ಅಪಘಾತ ಪ್ರಕರಣಗಳಿಗೆ ಮಿತಿಯೇ ಇಲ್ಲವಾಗುತ್ತಿದೆ. ಮಿತಿಮೀರಿದ ವೇಗ, ಅವೈಜ್ಞಾನಿಕ ರಸ್ತೆ ನಿರ್ಮಾಣ, ರಸ್ತೆ ಸುರಕ್ಷತೆ, ತಿರುವು ಸೂಚಿಸುವ ನಾಮಫಲಕಗಳ ಮೇಲೆ ಮಿತಿಮೀರಿದ ಪ್ಲೆಕ್ಸ್ ಹಾವಳಿ, ಮೊಬೈಲ್ ಬಳಕೆ ಮುಂತಾದ ಕಾರಣಗಳಿಂದ ಮಿತಿಮೀರಿ ಅಪಘಾತಗಳು ಸಂಭವಿಸಿ, ಸಾವು- ನೋವುಗಳು ಉಂಟಾಗುತ್ತಿದೆ.
ಈ ನಿಟ್ಟಿನಲ್ಲಿ ಚುನಾಯಿತ ಜನಪ್ರತಿನಿದಿಗಳು ಮಾಡಬೇಕಾದ ಕೆಲಸವನ್ನು ಹೊಸಹಳ್ಳಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರಾವ್ ಗಣೇಶ್ ಮಾಡಿದ್ದು, ಅವರ ಮುಂಜಾಗ್ರತೆಯ ಕಾರ್ಯ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಕಾರಣವಾಗಿದೆ.