ದೊಡ್ಡಬಳ್ಳಾಪುರ (Doddaballapura): ದೇಶದ ಸಾಂಸ್ಕೃತಿಕ ಬುನಾದಿಯಿಂದಲೇ ಅಸಮಾನತೆ ಬೆಳೆದಿದೆ. ಇದು ಸರಿಯಾದರೆ ಮಾತ್ರ ನಮ್ಮ ದೇಶದಲ್ಲಿ ಸಮಾನತೆ ನೆಲೆಗೊಳ್ಳುತ್ತದೆ ಎಂದು ಪ್ರಗತಿಪರ ಹೋರಾಟಗಾರ್ತಿ ಪ್ರಭಾಬೆಳವಂಗಲ (Prabhabelavangala) ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.
ಮಹಿಳಾ ಹೋರಾಟವು ಸಮಾನತೆಗಾಗಿ ಹಾಗೂ ಆತ್ಮಗೌರವದ ಬದುಕಿನ ಘನತೆಯನ್ನು ಒಳಗೊಂಡಿರುತ್ತದೆ. ಮಹಿಳಾ ಹೋರಾಟದ ಚರಿತ್ರೆಯನ್ನು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ಇದು ಎಲ್ಲಾ ಜಾತಿಯ ಬಡವರಿಂದಲೂ ದನಿ ಪಡೆಯಬೇಕಿದೆ.
ಇಂದಿನ ಯುದ್ಧ ಕೋರ ಜಾಗತೀಕ ರಾಜಕಾರಣವನ್ನು ದೂರವಾಗಿಸುವ ಭರವಸೆಯನ್ನು ಹೊಂದಬೇಕಿದೆ. ಯುದ್ದದಲ್ಲಿ ಶೋಷಣೆಗೆ ಒಳಗಾಗುತ್ತಿರುವ, ಸಾವು,ನೋವುಗಳನ್ನು ಅನುಭವಿಸುತ್ತಿರುವುದು ಮಹಿಳೆಯರು ಮತ್ತು ಮಕ್ಕಳು.
ಬಂಡವಾಳಶಾಹಿ ಪ್ರಭುತ್ವದಿಂದ ಇಂದಿನ ವಿಶ್ವವನ್ನು ಮುಕ್ತ ಮಾಡಬೇಕಿದೆ. ಮಹಿಳೆಯರಿಂದಲೇ ಜಗತ್ತು ಉಳಿದಿದೆ ಎನ್ನುವುದನ್ನು ಇತಿಹಾಸ ಹೇಳುತ್ತಿದೆ. ಈ ದಿಸೆಯಲ್ಲಿ ನಾವು ಮತ್ತಷ್ಟು ಹೋರಾಟ ರೂಪಿಸುವ ಅಗತ್ಯವಿದೆ.
ಮಹಿಳಾ ಹೋರಾಟದಲ್ಲಿ ಕೂಲಿ ಕಾರ್ಮಿಕ ಮಹಿಳೆಯರ ದಿಟ್ಟತನವನ್ನು, ಸಮಾನತೆಯ ಹಸಿವಿನ ಹಂಬಲವನ್ನು ನಾವು ಸ್ಮರಿಸಬೇಕು. ಹೊಸ ತಲೆಮಾರಿನ ಮಹಿಳೆಯರನ್ನು ಮಹಿಳಾ ಚಳವಳಿಯತ್ತ ಬರುವಂತೆಯು ಮಾಡಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ಕಾಲೇಜಿನ ಪ್ರಾಂಶುಪಾಲ ಡಾ.ಸದಾಶಿವ ರಾಮಚಂದ್ರಗೌಡ ವಹಿಸಿದ್ದರು.
ಕಾಲೇಜಿನ ವನಿತಾ ಕ್ಲಬ್ನ ಡಾ.ಶೋಭಾ ಮಲ್ಹಾರ, ಉಪನ್ಯಾಸಕರಾದ ಡಾ.ಬಿ.ಆರ್.ಗಂಗಾಧರಯ್ಯ ಇದ್ದರು.
ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.