ದೊಡ್ಡಬಳ್ಳಾಪುರ (Doddaballapura): ಇತ್ತೀಚೆಗಷ್ಟೇ ಕೆಸ್ತೂರು ಗೇಟ್ ಬಳಿ ಸಂಭವಿಸಿದ ಭೀಕರ ಕಾರು ಅಪಘಾತದ ಬೆನ್ನಲ್ಲೇ.. ಅದೇ ರಸ್ತೆಯ ರಾಮೇಶ್ವರ ಗೇಟ್ ಬಳಿ ಕಾರು ಅಪಘಾತಕ್ಕೀಡಾಗಿದ್ದು, ಕಾರಿನಲ್ಲಿದ್ದ ಚಾಲಕ ಸೇರಿ ಐವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಡೂರು ಮತ್ತು ಚಿಕ್ಕಮಗಳೂರು ಮೂಲದವರು ಎನ್ನಲಾಗುತ್ತಿರುವ ಸುಮಾರು 50 ವರ್ಷದ ಐದು ಮಂದಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಸಮೀಪ ನಡೆದ ಮದುವೆಯಲ್ಲಿ ಪಾಲ್ಗೊಂಡು ಹಿಂತಿರುಗಿ ತೆರಳುವ ವೇಳೆ ಈ ದುರ್ಘಟನೆ ಸಂಭವಿಸಿದೆ.
ದೊಡ್ಡಬಳ್ಳಾಪುರ ಮಾರ್ಗವಾಗಿ ದಾಬಸ್‌ಪೇಟೆ ಕಡೆಗೆ ತೆರಳುವ ಸಂದರ್ಭದಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿದ್ದು, ಡಿವೈಡರ್ ಮೂಲಕ ಸಾಗಿ ಪಕ್ಕದ ರಸ್ತೆಯಲ್ಲಿ ದಾಬಸ್‌ಪೇಟೆ ಕಡೆಯಿಂದ ದೊಡ್ಡಬಳ್ಳಾಪುರ ಕಡೆಗೆ ಕ್ಯಾಂಡರ್ ನಡುವಿನ ಡೀಸೆಲ್ ಟ್ಯಾಂಕ್ ಗೆ ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಓರ್ವನಿಗೆ ಗಂಭೀರ ಗಾಯಗಳಾಗಿದ್ದರೆ, ಉಳಿದ ನಾಲ್ಕು ಮಂದಿಗೆ ಹೆಚ್ಚಿನ ಗಾಯಗಳಾಗಿದೆ ಎನ್ನಲಾಗಿದೆ. ಗಾಯಾಳುಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನೂ ಕಾರು ಕ್ಯಾಂಟರ್ ಡೀಸೆಲ್ ಟ್ಯಾಂಕ್ ಡಿಕ್ಕಿ ಹೊಡೆದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಡೀಸೆಲ್ ಚೆಲ್ಲಾಡಿದ್ದು, ವಾಹನಗಳ ಜಾರುವಿಕೆಗೆ ಕಾರಣವಾಗಿತ್ತು. ಕೂಡಲೇ ಹೆಚ್ಚೆತ್ತ ದೊಡ್ಡಬೆಳವಂಗಲ ಠಾಣೆ ಪೊಲೀಸರು, ನೀರಿನಿಂದ ರಸ್ತೆಯಲ್ಲಿದ್ದ ಡೀಸೆಲ್ ನಿಂದ ಯಾವುದೇ ತೊಂದರೆ ಉಂಟಾಗದಂತೆ ಕ್ರಮಕೈಗೊಂಡು, ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು.

ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.