ಬೆಂಗಳೂರು: ಗ್ರಾಮಾಂತರ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ (Puc) ಪರೀಕ್ಷೆಯು ಸುಗಮವಾಗಿ ಪ್ರಾರಂಭಗೊಂಡಿದೆ.
ಜಿಲ್ಲೆಯ 17 ಪರೀಕ್ಷಾ ಕೇಂದ್ರಗಳಲ್ಲಿ ಮೊದಲ ದಿನ ನಡೆದ ಕನ್ನಡ ಭಾಷೆ ಪರೀಕ್ಷೆಯಲ್ಲಿ ಒಟ್ಟು 9282 ವಿದ್ಯಾರ್ಥಿಗಳು ಹಾಜರಾಗಿದ್ದರೆ, 302 ವಿದ್ಯಾರ್ಥಿಗಳು ಗೈರು ಹಾಜರಿಯಾಗಿದ್ದರು ಎಂದು ಶಾಲಾ ಶಿಕ್ಷಣ ಇಲಾಖೆ ( ಪದವಿಪೂರ್ವ) ಉಪನಿರ್ದೇಶಕ ಎನ್. ಮೋಹನ್ ಕುಮಾರ್ ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪರೀಕ್ಷಾ ಕೇಂದ್ರಗಳಲ್ಲಿ ಪ್ರಾರಂಭವಾದ ದ್ವಿತೀಯ ಪಿಯುಸಿ ಪರೀಕ್ಷೆಗೆ ಕುರಿತು ಮಾಹಿತಿ ನೀಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಮೂರು ಪರೀಕ್ಷಾ ಕೇಂದ್ರಗಳಲ್ಲಿ 2061 ವಿದ್ಯಾರ್ಥಿಗಳು ಹಾಜರಿ, 34 ಗೈರು ಹಾಜರಿ.
ದೇವನಹಳ್ಳಿ ತಾಲ್ಲೂಕಿನ ಮೂರು ಪರೀಕ್ಷಾ ಕೇಂದ್ರಗಳಲ್ಲಿ 1391 ವಿದ್ಯಾರ್ಥಿಗಳು ಹಾಜರಿ, 65 ಗೈರು ಹಾಜರಿ, ಹೊಸಕೋಟೆ ತಾಲ್ಲೂಕಿನ ಐದು ಪರೀಕ್ಷಾ ಕೇಂದ್ರಗಳಲ್ಲಿ 3191 ವಿದ್ಯಾರ್ಥಿಗಳು ಹಾಜರಿ, 92 ಗೈರು ಹಾಜರಿ ಮತ್ತು ನೆಲಮಂಗಲ ತಾಲ್ಲೂಕಿನ ಆರು ಪರೀಕ್ಷಾ ಕೇಂದ್ರಗಳಲ್ಲಿ 2677 ವಿದ್ಯಾರ್ಥಿಗಳು ಹಾಜರಿ, 111 ಗೈರು ಹಾಜರಿಯಾಗಿದ್ದಾರೆ.
ಪ್ರತಿ ಪರೀಕ್ಷಾ ಕೊಠಡಿಯಲ್ಲೂ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಿದ್ದು ವೆಬ್ ಕಾಸ್ಟಿಂಗ್ ಮಾಡಲಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಮತ್ತು ಜಿಲ್ಲಾಡಳಿತದ ಮಾರ್ಗದರ್ಶನದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಪಾರದರ್ಶಕತೆ ಮತ್ತು ಸುವ್ಯವಸ್ಥಿತವಾಗಿ ಪರೀಕ್ಷೆ ನಡೆಸಲಾಗುತ್ತಿದೆ ಎಂದರು.
ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ
ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ದೊಡ್ಡಬಳ್ಳಾಪುರ ತಾಲ್ಲೂಕಿನ ಶ್ರೀ ಕೊಂಗಾಡಿಯಪ್ಪ ಪದವಿಪೂರ್ವ ಕಾಲೇಜು ಸರಿದಂತೆ ವಿವಿಧ ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ್ದರು.
ಕಾನೂನು ವ್ಯವಸ್ಥೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರತಿ ಪರೀಕ್ಷಾ ಕೇಂದ್ರಗಳಲ್ಲೂ ಜಾಗೃತ ದಳ ವ್ಯವಸ್ಥೆ ಜೊತೆಗೆ ಪೊಲೀಸ್ ಭದ್ರತಾ ವ್ಯವಸ್ಥೆ ಕಂಡು ಬಂತು. ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ಸುತ್ತಳತೆಯಲ್ಲಿ ನಿಷೇಧಾಜ್ಞೆ, ಜೆರಾಕ್ಸ್ ಅಂಗಡಿಗಳು ಹಾಗೂ ಕಂಪ್ಯೂಟರ್ ಸೆಂಟರ್‍ಗಳನ್ನು ಮುಚ್ಚಿದ್ದವು.
ಜಿಲ್ಲೆಯ ಪರೀಕ್ಷಾ ಕೇಂದ್ರಗಳಿಗೆ ಬಂದ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ ಮತ್ತು ಪ್ರವೇಶ ಪತ್ರ ಪರಿಶೀಲನೆ ಮಾಡಿ, ಪರೀಕ್ಷಾ ಕೊಠಡಿಗಳಿಗೆ ಕಳುಹಿಸುತ್ತಿದ್ದ ದೃಶ್ಯ ಕಂಡು ಬಂತು.