ಬೆಂಗಳೂರು: ಪಾಪ ಬಿಜೆಪಿ (BJP) ನಾಯಕರಿಗೆ ಈಗ ಬೆಂಗಳೂರು ನೆನಪಾಗ್ತಾ ಇದೆ.. ಬಹಳ ಸಂತೋಷ ಎಂದು ಡಿಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ (DK Shivakumar) ಅವರು ವ್ಯಂಗ್ಯವಾಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದ ಬಿಜೆಪಿ ನಿಯೋಗವು ಇಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಬೆಂಗಳೂರು ನಗರದ ಪ್ರತಿ ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗೆ ರೂ.150 ಕೋಟಿ ಅನುದಾನ ನೀಡುವಂತೆ ಮನವಿ ಮಾಡಿದೆ.
ಮೆಟ್ರೋ ಪ್ರಯಾಣದ ದರ ಏರಿಕೆ, ಮೊದಲ ಬಾರಿಗೆ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಅನುದಾನ ಹಂಚಿಕೆ ಮತ್ತು ಬಿಬಿಎಂಪಿ ಚುನಾವಣೆ ಆದಷ್ಟು ಬೇಗ ನಡೆಸಬೇಕು ಸೇರಿದಂತೆ ಹಲವು ವಿಷಯಗಳ ಕುರಿತು ಸಿಎಂ ಜೊತೆ ಬಿಜೆಪಿ ನಿಯೋಗ ಚರ್ಚಿಸಿದೆ.
ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್ ಅವರು, ಇಷ್ಟು ದಿನ ಬಿಜೆಪಿ ಶಾಸಕರಿಗೆ ಬೆಂಗಳೂರು ನೆನಪಾಗಲಿಲ್ವಾ? ಇರಲಿ ಅವರು ಸಿಎಂಗೆ ಭೇಟಿ ಮಾಡಿದ್ದು ಅವರ ಡ್ಯೂಟಿ. ನಾವು ಬೆಂಗಳೂರನ್ನ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಮಾಡುತ್ತಿದ್ದೇವೆ.
ಬೆಂಗಳೂರಿನ ಬಗ್ಗೆ ನಮಗೆ ಗೊತ್ತಿದೆ. ನಮ್ಮ ಬೆಂಗಳೂರು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದೆ. ಅನುದಾನ ಕೇಳಿರುವುದರಲ್ಲಿ ತಪ್ಪಿಲ್ಲ. ಖಂಡಿತವಾಗಿಯೂ ಯಾರ್ ಯಾರಿಗೆ, ಯಾವ್ಯಾವ ಕ್ಷೇತ್ರಗಳಿಗೆ ಎಷ್ಟೆಷ್ಟು ಅನುದಾನ ನೀಡಬೇಕು ಎಂದು ಮುಖ್ಯಮಂತ್ರಿಗಳು ತೀರ್ಮಾನ ಮಾಡ್ತಾರೆ ಎಂದರು.