ಬೆಂಗಳೂರು: ಇಡ್ಲಿ ಪ್ರಿಯರಿಗೆ ಆಹಾರ ಇಲಾಖೆ ಶಾಕಿಂಗ್ ಸುದ್ದಿಯೊಂದನ್ನ ನೀಡಿದೆ. ಅನೇಕ ಹೋಟೆಲ್‌ಗಳಲ್ಲಿ ತಯಾರಾಗುವ ಇಡ್ಲಿ ಅಸುರಕ್ಷಿತ ಎಂಬುದು ಆಹಾರ ಇಲಾಖೆಯ ಪ್ರಯೋಗದಿಂದ ದೃಢಪಟ್ಟಿದೆ.
ಬೆಂಗಳೂರಿನ ವಿವಿಧೆಡೆಗಳಿಂದ ಇಡ್ಲಿ ಮಾದರಿಗಳನ್ನು ಪಡೆದಿದ್ದ ಆಹಾರ ಇಲಾಖೆ ಅವುಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದ್ದು, ಇದೀಗ ಪ್ರಯೋಗಾಲಯ ವರದಿಯಲ್ಲಿ 35 ಕ್ಕೂ ಹೆಚ್ಚು ಇಡ್ಲಿ ಮಾದರಿಗಳು ಅಸುರಕ್ಷಿತ ಎಂಬ ಶಾಕಿಂಗ್ ವಿಚಾರ ಬಹಿರಂಗವಾಗಿದೆ.
ಬೆಂಗಳೂರಿನ ಹಲವಡೆ ಇತ್ತೀಚೆಗೆ ಇಡ್ಲಿ ತಯಾರಿಸಲು ಬಟ್ಟೆಯ ಬದಲು ಪ್ಲಾಸ್ಟಿಕ್ ಕವರ್ ಬಳಕೆ ಮಾಡಲಾಗುತ್ತಿದೆ. ಇಡ್ಲಿ ಮಾಡುವಾಗ ಮಾತ್ರವಲ್ಲದೆ ಆಹಾರವನ್ನು ಬಡಿಸುವಾಗ ಮತ್ತು ಪ್ಯಾಕ್ ಮಾಡುವಾಗಲೂ ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದೆ.
ಪ್ಲಾಸ್ಟಿಕ್ ಹಾಳೆಯು ಶಾಖಕ್ಕೆ ಒಡ್ಡಿಕೊಂಡು ಹಾನಿಕಾರಕ ವಸ್ತುವನ್ನು ಹೊರಸೂಸುತ್ತಿದೆ. ಇದು ಕ್ಯಾನ್ಸರ್ ಕಾರಕವಾಗಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದರು.
ತಜ್ಞರ ಎಚ್ಚರಿಕೆ ಬೆನ್ನಲ್ಲೇ ಆಹಾರ ಇಲಾಖೆ ಬೆಂಗಳೂರಿನ ಹಲವಡೆಯಿಂದ ಇಡ್ಲಿ ಮಾದರಿಗಳನ್ನು ಸಂಗ್ರಹ ಮಾಡಿತ್ತು.
ಬೆಂಗಳೂರಿನ ವಿವಿಧ ಭಾಗಗಳಲ್ಲಿ ಹೋಟೆಲ್ ಹಾಗೂ ತಿಂಡಿಗಳ ಅಂಗಡಿಗಳಿಂದ 500ಕ್ಕೂ ಹೆಚ್ಚು ಇಡ್ಲಿ ಸ್ಯಾಂಪಲ್ಸ್ ಸಂಗ್ರಹ ಮಾಡಿದ್ದು, ಇವುಗಳಲ್ಲಿ 35 ಕ್ಕೂ ಹೆಚ್ಚು ಇಡ್ಲಿ ಸ್ಯಾಂಪಲ್ಸ್ ಅಸುರಕ್ಷಿತ ಎಂಬ ವರದಿ ಬಂದಿದೆ.
ಇನ್ನೂ ನೂರಾರು ಇಡ್ಲಿ ಸ್ಯಾಂಪಲ್ಸ್ ವರದಿಗೆ ಕಾಯಲಾಗುತ್ತಿದೆ. ಹೀಗಾಗಿ ಇನ್ಮುಂದೆ ಇಡ್ಲಿ ಸೇವಿಸುವ ಗ್ರಾಹಕರು ಎಚ್ಚರ ವಹಿಸಬೇಕಾಗುತ್ತದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಉಪಹಾರ ಕೇಂದ್ರಗಳು ಮತ್ತು ಹೋಟೆಲ್‌ಗಳಲ್ಲಿ ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದ್ದು, ಇದನ್ನು ನಿಷೇಧಿಸಲಾಗಿದೆ.
ಇನ್ನೇರಡು ದಿನಗಳಲ್ಲಿ ಅಧಿಕೃತ ಸುತ್ತೊಲೆ ನೀಡಲಾಗುವುದು. ಈ ಮೊದಲು ಇಡ್ಲಿ ತಯಾರಿಕೆಗೆ ಹತ್ತಿ ಬಟ್ಟೆ ಬಳಕೆ ಮಾಡಲಾಗುತ್ತಿತ್ತು. ಆದರೆ, ಇತ್ತೀಚೆಗೆ ಹೆಚ್ಚಿನ ಹೋಟೆಲ್‌ಗಳಲ್ಲಿ ಪ್ಲಾಸ್ಟಿಕ್ ಬಳಸುತ್ತಿದ್ದಾರೆ.
ಪ್ಲಾಸ್ಟಿಕ್ ಬಳಕೆಯಿಂದ ಸಾರ್ವಜನಿಕರು ಸೇವಿಸುವ ಇಡ್ಲಿಯಲ್ಲಿ ಕಾರ್ಸಿನೋಜೆನಿಕ್ ಅಂಶ ಮಿಶ್ರಣವಾಗುತ್ತಿದೆ. ಇದು ಆರೋಗ್ಯಕ್ಕೆ ಮಾರಕ.