ದೆಹಲಿ (Delhi): ಚುನಾವಣೆಯಲ್ಲಿ ನಿರಾಯಾಸವಾಗಿ ಗೆದ್ದರು ಸಿಎಂ ಆಯ್ಕೆ ಮಾಡುವಲ್ಲಿ ಕಳೆದ ಒಂದು ವಾರದಿಂದ ತೀವ್ರ ಇಕ್ಕಟ್ಟಿಗೆ ಸಿಲುಕಿದ್ದ ಬಿಜೆಪಿ (BJP) ಹೈಕಮಾಂಡ್ ಅಂತಿಮವಾಗಿ ಅಚ್ಚರಿಯ ಆಯ್ಕೆಯನ್ನು ಮಾಡಿದೆ.
ಬಿಜೆಪಿ ಹೈಕಮಾಂಡ್, ಚುನಾವಣೆಯಲ್ಲಿ ವಿಧಾನಸಭೆ ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿರುವ ರೇಖಾ ಗುಪ್ತಾ (Rekha Gupta) ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಿದೆ.
ಇದರೊಂದಿಗೆ ರಾಷ್ಟ್ರ ರಾಜಧಾನಿಗೆ ನಾಲ್ಕನೇ ಬಾರಿಗೆ ಮಹಿಳಾ ಮುಖ್ಯಮಂತ್ರಿ ಸಿಕ್ಕಂತಾಗಿದೆ. ಇದಕ್ಕೂ ಮೊದಲು ಸುಷ್ಠಾ ಸ್ವರಾಜ್ ಒಂದು ಬಾರಿ, ಶೀಲಾ ದೀಕ್ಷಿತ್ ಮೂರು ಬಾರಿ ದೆಹಲಿಯ ಮುಖ್ಯಮಂತ್ರಿ ಗದ್ದುಗೆ ಏರಿದ್ದರು.
ಶಾಲಿಮಾರ್ ಬಾಗ್ (ವಾಯುವ್ಯ) ಕ್ಷೇತ್ರದ ಶಾಸಕರಾದ ರೇಖಾ ಗುಪ್ತಾ ಆಮ್ ಆದ್ದಿ ಪಕ್ಷದ ಬಂದನಾ ಕುಮಾರಿ ಅವರನ್ನು ಸೋಲಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದವರು.
50 ವರ್ಷದ ರೇಖಾ ಗುಪ್ತಾ ಈ ಹಿಂದೆ 2015 ಹಾಗೂ 2020ರ ವಿಧಾನಸಭೆ ಚುನಾವಣೆಯಲ್ಲಿ ಬಂದನಾ ಕುಮಾರಿ ವಿರುದ್ಧ ಸರ್ಧಿಸಿ ಸೋಲು ಕಂಡಿದರು.
ಇವರು ಮೂಲತ: ಮೂಲತಃ ಹರ್ಯಾಣದವರು. ಜುಲೈ 19, 1974ರಂದು ಹರಿಯಾಣದ ಜಿಂದ್ ಜಿಲ್ಲೆಯ ನಂದಗಢ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಬ್ಯಾಂಕ್ ಅಧಿಕಾರಿಯಾಗಿದ್ದರು. 1976ರಲ್ಲಿ ಇವರು ಎರಡು ವರ್ಷದವರಿದ್ದಾಗ ಗುಪ್ತಾ ಕುಟುಂಬವು ದಿಲ್ಲಿಗೆ ಸ್ಥಳಾಂತರಗೊಂಡಿತ್ತು.
ವಿದ್ಯಾರ್ಥಿ ಜೀವನದಿಂದಲೇ ರೇಖಾ ಗುಪ್ತಾ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರು. ಮೊದಲಿಗೆ ಆರ್‌ಎಸ್‌ಎಸ್‌ನ ವಿದ್ಯಾರ್ಥಿ ವಿಭಾಗವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಲ್ಲಿ ಸಕ್ರಿಯವಾಗಿದ್ದರು.
1996-1997ರಲ್ಲಿ ದಿಲ್ಲಿ ಎಶ್ವವಿದ್ಯಾನಿಲಯದ ವಿದ್ಯಾರ್ಥಿ ಪರಿಷತ್ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದರು. ಮುಂದೆ ಬಿಜೆಪಿ ಸೇರಿದ ಇವರು ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ)ಗೆ ಸೇರಿದರು. ದಿಲ್ಲಿ ಘಟಕದಲ್ಲಿ ಕಾರ್ಯದರ್ಶಿ ಜವಾಬ್ದಾರಿ ನಿರ್ವಹಿಸಿದರು.
2007ರಲ್ಲಿ ಮೊದಲ ಬಾರಿಗೆ ಚುನಾವಣೆಗೆ ಉತ್ತರ ಪಿತಾಂಪುರ ಕ್ಷೇತ್ರದಿಂದ ಕೌನ್ಸಿಲರ್ ಆಗಿ ಆಯ್ಕೆಯಾದರು. 2007ರಿಂದ 2009ರವರೆಗೆ ಎಂಸಿಡಿಯಲ್ಲಿ ಮಹಿಳಾ ಕಲ್ಯಾಣ ಮತ್ತು ಮಕ್ಕಳ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿಯೂ ಇವರು ಸೇವೆ ಸಲ್ಲಿಸಿದರು.
ಮೂಲಕವೇ ಕೇಂದ್ರ ನಾಯಕರ ಗಮನ ಸೆಳೆದರು. ಪರಿಣಾಮ 2004 ರಿಂದ 2006ರವರೆಗೆ ಯುವ ಮೋರ್ಚಾದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕಗೊಂಡರು.
ದಿಲ್ಲಿ ಬಿಜೆಪಿ ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ, ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸದಸ್ಯೆಯಾಗಿ ಬಿಜೆಪಿಯಲ್ಲಿ ಹಲವಾರು ಹುದ್ದೆಗಳನ್ನು ನಿಭಾಯಿಸಿದರು. ಇವರ ಸಾಮರ್ಥ್ಯವನ್ನು ಗುರುತಿಸಿ ಕಳೆದ ವರ್ಷ ದಿಲ್ಲಿ ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆ ಯಲ್ಲಿ ಬಿಜೆಪಿ ಇವರನ್ನೇ ಅಭ್ಯರ್ಥಿಯಾಗಿಸಿತ್ತು.
ಎಎಪಿ ಮುಖ್ಯಸ್ಥ ಅರವಿಂದ್ ಕೇಜಿವಾಲ್ ಅವರನ್ನು ಸೋಲಿಸಿದ ಪರ್ವೇಶ್ ವರ್ಮಾ, ದೆಹಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆಶಿಶ್ ಸೂದ್, ಮಾಜಿ ವಿರೋಧ ಪಕ್ಷದ ನಾಯಕ ವಿಜೇಂದರ್ ಗುಪ್ತಾ, ಸತೀಶ್ ಉಪಾಧ್ಯಾಯ ಮತ್ತು ಜಿತೇಂದ್ರ ಮಹಾಜನ್ ಸೇರಿದಂತೆ ಹಲವರನ್ನು ಹಿಂದಿಕ್ಕಿ ರೇಖಾ ಸಿಎಂ ಹುದ್ದೆ ಪಡೆದಿದ್ದಾರೆ.