ದೊಡ್ಡಬಳ್ಳಾಪುರ (Doddaballapura); ನಗರದ ಇತಿಹಾಸ ಪ್ರಸಿದ್ದ ಶ್ರೀ ಪ್ರಸನ್ನ ಲಕ್ಷ್ಮೀ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವವು ನಗರದ ತೇರಿನ ಬೀದಿಯಲ್ಲಿ ಗುರುವಾರ ವಿಜೃಂಭಣೆಯಿಂದ ನಡೆಯಿತು.
ರಾಜ್ಯದ ವಿವಿದೆಡೆಗಳಿಂದ ಬಂದಿದ್ದ ಸಹಸ್ರಾರು ಭಕ್ತಾದಿಗಳು ಶ್ರದ್ಧಾ ಭಕ್ತಿಗಳಿಂದ ರಥಕ್ಕೆ ಹಣ್ಣು ದವನ ಅರ್ಪಿಸಿ ಧನ್ಯತೆ ಮೆರೆದರು.
ಬ್ರಹ್ಮರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಅಲಂಕಾರ ಕಲ್ಯಾಣೋತ್ಸವ, ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.
ಇಲ್ಲಿನ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಾಲಯದ ಅನ್ನಸಂತರ್ಪಣಾ ಸಮಿತಿ ವತಿಯಿಂದ ಅನ್ನ ಸಂತರ್ಪಣೆ, ಶ್ರೀ ಶ್ರೀಕಂಠೇಶ್ವರ ಸ್ವಾಮಿ ಭಕ್ತ ಮಂಡಲಿಯಿಂದ, ಲೋಕಸೇವಾನಿರತ ಡಿ.ಕೊಂಗಾಡಿಯಪ್ಪನವರ ಸ್ಮರಣಾರ್ಥ ನಗರದ ದೇವಾಂಗ ಮಂಡಲಿಯಲ್ಲಿ ಅರವಂಟಿಗೆ, ಬಿಸಿಲಹಳ್ಳಿ ಚಿಕ್ಕಚೌಡಪ್ಪನವರ ಭಜನಾ ಮಂಡಲಿ ಸೇರಿದಂತೆ ವಿವಿಧ ಮಂಡಲಿಗಳಿಂದ ಅರವಂಟಿಕೆ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಪದ್ಮಶಾಲಿ ಸಂಘ, ಪದ್ಮಶಾಲಿ ಯುವ ಜನ ವೇದಿಕೆ, ಪದ್ಮಶಾಲಿ ಮಹಿಳಾ ಸಂಘದ ಸಹಯೋಗದಲ್ಲಿ ಚಂದ್ರಮೌಳೇಶ್ವರ ದೇವಾಲಯದ ಮುಂಭಾಗ ಅರವಂಟಿಕೆ ಏರ್ಪಡಿಸಲಾಗಿತ್ತು.
ಪ್ರತಿವಷ ನಡೆಸುವ ಈ ಅರವಂಟಿಗೆಗೆ 100 ವರ್ಷಗಳ ಇತಿಹಾಸವಿದ್ದು, ಮೂರನೇ ತಲೆಮಾರಿನಿಂದ ಇಂದು ಅರವಂಟಿಗೆ ನಡೆಸಲಾಗುತ್ತಿದೆ.
ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ಜಾತ್ರಾ ಸಾಂಸ್ಕೃತಿಕ ಸಮಿತಿ ವತಿಯಿಂದ, ಬ್ರಹ್ಮರಥೋತ್ಸವದ ಅಂಗವಾಗಿ ಫೆಬ್ರವರಿ 13ಮತ್ತು 14 ರಂದು ನಾಟಕೋತ್ಸವ ಹಾಗೂ ವಿವಿಧ ಸಾಂಸ್ಕೃತಿಕ ಕಾರ‍್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಫೆಬ್ರವರಿ 13 ರಂದು ಸಂಜೆ 6 ರಿಂದ ಗಡಾಚಾರಿ ವೆಂಕಟೇಶ್ ತಂಡದವರಿಂದ ಗೊರವನ ಕುಣಿತ ಹಾಗೂ ಸಾಂಸ್ಕೃತಿಕ ಕರ‍್ಯಕ್ರಮವಿದೆ.
ಸಂಜೆ 6.30ಗಂಟೆಗೆ ನಾಟಕೋತ್ಸವ ಉದ್ಘಾಟನೆ ನಡೆಯಲಿದೆ.
ರಾತ್ರಿ 9 ಗಂಟೆಗೆ ಶ್ರೀ ಅಭಯ ಆಂಜನೇಯ ಕೃಪಾಪೋಷಿತ ನಾಟಕ ಮಂಡಲಿ, ಸಂಜಯ ನಗರ ವತಿಯಿಂದ ಚಂದ್ರಶೇಖರ್ ನರ‍್ದೇಶನದ ಸತ್ಯ ಹರಿಶ್ಚಂದ್ರ ಪೌರಾಣಿಕ ನಾಟಕ ಪ್ರದರ್ಶನವಿದೆ.
ಫೆಬ್ರವರಿ 14 ರಂದು ಸಂಜೆ 6 ಕ್ಕೆ ಶಿವರಾಜ್ ನಿರ್ದೇಶನದ ಗೆಲುವು ಯಾರದು ಸಾಮಾಜಿಕ ನಾಟಕ ಪ್ರದರ್ಶನವಿದೆ.
ಸಂಜೆ 7ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.
ರಾತ್ರಿ 9 ಗಂಟೆಗೆ ಪದ್ಮಪ್ರಿಯ ಕೃಪಾಪೋಷಿತ ನಾಟಕ ಮಂಡಲಿಯವರಿಂದ ಎಸ್.ಬಸವರಾಜಯ್ಯ ನಿರ್ದೇಶನದ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನವಿದೆ.