ದೊಡ್ಡಬಳ್ಳಾಪುರ: ಜವಾಹರ್ ನವೋದಯ ವಿದ್ಯಾಲಯ (JNV) ವಿದ್ಯಾರ್ಥಿನಿಯರಿಗೆ ಕೇಂದ್ರ ಸರ್ಕಾರ ಹಾಗೂ ಸ್ವಯಂ ಸೇವಾ ಸಂಸ್ಥೆ ಸಹಯೋಗದೊಂದಿಗೆ ನೀಡಿದ ಉಚಿತ ಜೆಇಇ ತರಬೇತಿಯಿಂದಾಗಿ ಈ ಸಾಲಿನ ಜೆಇಇ ಮುಖ್ಯ ಪ್ರವೇಶ ಪರೀಕ್ಷೆಯಲ್ಲಿ ಶೇ.90ರಷ್ಟು ಉತ್ತೀರ್ಣರಾಗಿ ರಾಜ್ಯದಲ್ಲಿಯೇ ಪ್ರಥಮ ಎನಿಸಿದೆ.
ವಿದ್ಯಾರ್ಥಿನಿಯರಿಗಾಗಿಯೇ ಕೇಂದ್ರ ಸರ್ಕಾರ ರಾಷ್ಟ್ರೀಯ ಮಟ್ಟದಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ (ಶ್ರೇಷ್ಠತೆಯ ಕೇಂದ್ರ) ಅಡಿಯಲ್ಲಿ ಹೈದರಾಬಾದ್ ವಲಯದಿಂದ 40 ಜನ ವಿದ್ಯಾರ್ಥಿನಿಯರಿಗೆ ದಕ್ಷಣ ಫೌಂಡೇಷನ್ ಮತ್ತು ಎಸ್.ಆರ್.ಎಲ್ ಅಕಾಡೆಮಿಯಿಂದ ಗುಣಮಟ್ಟದ ಉಚಿತ ತರಬೇತಿ ನೀಡಲಾಗಿದೆ
ಪರೀಕ್ಷೆ ತೆಗೆದುಕೊಂಡಿದ್ದ 40 ವಿದ್ಯಾರ್ಥಿಗಳಲ್ಲಿ 36 ಜನ ಉತ್ತೀರ್ಣರಾಗಿ ಜೆಇಇ ಅಡ್ವಾನ್ಸ್ಗೆ ಅರ್ಹತೆ ಪಡೆದಿದ್ದಾರೆ.
ಜವಾಹರ್ ನವೋದಯ ಶಾಲೆಯಲ್ಲಿ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಈ ತರಬೇತಿಯಿಂದ ಅವರು ಐಐಟಿಯಲ್ಲಿ ಉತ್ತೀರ್ಣರಾಗುವ ಕನಸು ಸಾಕಾರಗೊಳ್ಳಲಿದೆ.
ಎಸ್ಆರ್ಎಲ್ ಅಕಾಡೆಮಿ ಸಂಸ್ಥೆಯಿಂದ ಇದೇ ಮೊದಲ ಬಾರಿಗೆ ಜವಾಹರ್ ನವೋದಯ ವಿದ್ಯಾಲಯದಲ್ಲಿ ಕೇಂದ್ರ ಸರ್ಕಾರದ ಸಹಯೋಗದಲ್ಲಿ 12ನೇ ತರಗತಿ ವಿದ್ಯಾರ್ಥಿನಿಯರಿಗೆ ಉತ್ತಮ ಬೋಧಕರಿಂದ ತರಬೇತಿ ಕೊಡಿಸಿ ಉತ್ತಮ ಫಲಿತಾಂಶ ಪಡೆಯಲಾಗಿದೆ.
ಜೆಇಇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿನಿ ಸೋದಿಕಾ ಹಾಗೂ ಜೀವಿತಾ ತನ್ನ ಅನುಭವ ಹಂಚಿಕೊಂಡು, ಇದೇ ಪ್ರಥಮವಾಗಿ ಎಸ್ಆರ್ಎಲ್ ಅಕಾಡೆಮಿ ಜೊತೆಗೂಡಿ ನಮಗೆ ಉತ್ತಮ ತರಬೇತಿ ನೀಡಿದ್ದಾರೆ.
ವಿದ್ಯಾಲಯದ ಪ್ರಾಂಶುಪಾಲರು, ಅಧ್ಯಾಪಕರು ಸಹ ನಮಗೆ ಉತ್ತಮ ಮಾರ್ಗದರ್ಶನ ನೀಡುತ್ತಿರುವುದು ಸಂತಸ ತಂದಿದೆ.
ಐಐಟಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ನಮ್ಮ ಗುರಿಯಾಗಿದೆ. ತಾಂತ್ರಿಕ ಶಿಕ್ಷಣದಲ್ಲಿ ಯಾವುದಾದರೂ ಗುರಿ ಮುಟ್ಟುವ ವಿಶ್ವಾಸವಿದೆ ಎಂದರು.