ದೊಡ್ಡಬಳ್ಳಾಪುರ (Doddaballapura): ಸರ್ಕಾರಿ ಸಾರಿಗೆ ಬಸ್ಸುಗಳ ಸೂಕ್ತ ನಿರ್ವಹಣೆ ಕೊರತೆಯಿಂದಾಗಿ ಪ್ರಯಾಣಿಕರು ಪ್ರತಿನಿತ್ಯ ಸಿಬ್ಬಂದಿಗಳೊಂದಿಗೆ ಮಾತಿನ ಚಕಮಕಿ ನಡೆಸಬೇಕಾದ ಅನಿವಾರ್ಯತೆ ಪ್ರತಿ ದಿನ ಬಸ್ ನಿಲ್ದಾಣದಲ್ಲಿ ಕಂಡು ಬರುತ್ತಿದೆ.
ನಗರದಿಂದ ಬೆಂಗಳೂರು ಕಡೆಗೆ ಸಾಗುವ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆದರೆ ಅಗತ್ಯಕ್ಕೆ ತಕ್ಕಂತೆ ಬಸ್ಸುಗಳು ಸಂಖ್ಯೆ ಮಾತ್ರ ಹೆಚ್ಚಾಗುತ್ತಿಲ್ಲ ಎಂಬುದು ಆರೋಪ.
ಕಳೆದ ವರ್ಷ ಬಸ್ ಸಮಸ್ಯೆ ತೀವ್ರವಾಗಿ ಸದ್ದು ಮಾಡಿ, ರಾಜಕೀಯ ಬಣ್ಣ ಪಡೆದು ಆರೋಪ, ಪ್ರತ್ಯಾರೋಪ ನಡೆದು, ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಆಕ್ರೋಶ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ದೂರು.. ಅವರಿಂದ ಎರಡು ಹೆಚ್ಚುವರಿ ಬಸ್ ನೀಡುವಿಕೆ ಸೇರಿದಂತೆ ಅನೇಕ ಬೆಳವಣಿಗೆ ನಡೆಯಿತು. ಅಲ್ಲಿಗೆ ಚರ್ಚೆ ಶುಭಂ..
ಆದರೆ ಸಮಸ್ಯೆ ಬಗೆಹರಿಯಿತೇ ಎಂದರೆ ಇಲ್ಲ. ಪ್ರತಿ ನಿತ್ಯ ಬೆಳಗ್ಗೆ ಮತ್ತು ಸಂಜೆ ಸಾರಿಗೆ ಬಸ್ಸುಗಳಲ್ಲಿ ಉಸಿರು ಗಟ್ಟುವ ದುಸ್ಥಿತಿ ಇದೆ. ನಿಗದಿ ಪ್ರಯಾಣಿಕರಿಗಿಂತ ಮೂರು, ನಾಲ್ಕು ಪಟ್ಟು ತುಂಬಿಕೊಂಡು ಬಸ್ಸುಗಳು ತೆರಳುತ್ತಿವೆ.
ಸಮಯಕ್ಕೆ ಸರಿಯಾಗಿ ದೊರಕದ ಬಸ್ಸುಗಳಿಂದಾಗಿ ವಿದ್ಯಾರ್ಥಿಗಳು, ಸಿಬ್ಬಂದಿಗಳು, ಪ್ರಯಾಣಿಕರು ಸಮಯಕ್ಕೆ ಶಾಲೆ, ಕಾಲೇಜು, ನೌಕರಿ ತೆರಳು ಸಾಧ್ಯವಾಗದೆ ದಿನ ನಿತ್ಯ ಹಿಡಿ ಶಾಪ ಹಾಕುತ್ತಿದ್ದಾರೆ.
ತಾಯಂದಿರಗೆ ಅಗೌರವ
ಸರ್ಕಾರಿ ಸಾರಿಗೆ ಬಸ್ಸುಗಳಲ್ಲಿ ಶಕ್ತಿ ಯೋಜನೆ ಅಡಿಯಲ್ಲಿ ಉಚಿತ ಪ್ರಯಾಣಕ್ಕೆ ಸರ್ಕಾರ ಅವಕಾಶ ಕಲ್ಪಿಸಿದೆ. ಆದರೆ ಇದೇ ಕಾರಣಕ್ಕೆ ತಾಯಂದಿರನ್ನು ಅಗೌರವದಿಂದ ಕಾಣಲಾಗಿತ್ತಿದೆ.
ಆಧಾರ್ ಕಾರ್ಡ್ ತೋರಿಸಿದರೆ, ರಸ್ತೆ ನಡುವೆ ಬಸ್ ನಿಲ್ಲಿಸುವಂತೆ ಮನವಿ ಮಾಡಿದರೆ ಕೆಲ ಚಾಲಕ, ನಿರ್ವಾಹಕರು ತಾವು ಕೂಡ ಒಂದು ತಾಯಿಯ ಹೊಟ್ಟೆಯಲ್ಲಿ ಹುಟ್ಟಿದವರು ಎಂಬುದನ್ನು ಮರೆತು ಅಮಾಮವೀಯವಾಗಿ ವರ್ತಿಸುತ್ತಿದ್ದಾರೆ ಎಂಬ ಬೇಸರ ಮಹಿಳೆಯರದ್ದಾಗಿದೆ.
ಸಬೂಬು
ಇನ್ನೂ ಈ ಕುರಿತಂತೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಸಿಬ್ಬಂದಿಗಳ ಕೊರತೆ ಅದೂ, ಇದೂ ಸಬೂಬು ಹೇಳುತ್ತಾರೆಯೇ ಹೊರತು, ಪ್ರಯಾಣಿಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಯಾರು ಇಲ್ಲವಾಗಿದೆ ಎಂದು ಪ್ರಯಾಣಿಕ ಶಾಹಿಲ್ ಜೈನ್ ಬೇಸರ ವ್ಯಕ್ತಪಡಿಸಿದ್ದಾರೆ.