ಬೆಂಗಳೂರು: ಮೆಟ್ರೊ ದರ ಏರಿಕೆಗೆ ರಾಜ್ಯ ಸರ್ಕಾರ ಹೊಣೆಯಲ್ಲ. ಕೇಂದ್ರ ಸರ್ಕಾರದ ನಿಯಂತ್ರಣದ ಕಮಿಟಿ ಈ ನಿರ್ಧಾರ ಮಾಡಿದೆ. ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರಿಗೆ ಧಮ್ ಇದ್ದರೆ ‘ನಮ್ಮ ಮೆಟ್ರೊ’ ಪ್ರಯಾಣ ದರ ಕಡಿಮೆ ಮಾಡಿಸಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank karge) ಸವಾಲು ಎಸೆದಿದ್ದಾರೆ.
‘ನಮ್ಮ ಮೆಟ್ರೊ’ ಪ್ರಯಾಣ ದರವನ್ನು ಬಿಎಂಆರ್‌ಸಿಎಲ್ ಶೇ 47ರಷ್ಟು ಹೆಚ್ಚಳ ಮಾಡಿರುವುದಕ್ಕೆ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿರುವ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.
ಮೆಟ್ರೊ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿದೆ. ಈ ಹಿಂದೆ ಮೆಟ್ರೊ ಪ್ರಯಾಣ ದರ ಏರಿಕೆ ಮಾಡುವುದಿಲ್ಲ ಎಂದಾಗ ಇದೇ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಪಿಸಿ ಮೋಹನ್ ಮೋದಿ ಅವರಿಗೆ ಧನ್ಯವಾದ ಹೇಳಿದ್ದರು.
ಈಗ ದರ ಏರಿಕೆ ಮಾಡಿದಾಗ ನಾವು (ರಾಜ್ಯ ಸರ್ಕಾರ) ಜವಾಬ್ದಾರಿಯೇ? ಈಗಲೂ ಕೇಂದ್ರ ಸರ್ಕಾರವನ್ನು ಹೋಗಿ ಕೇಳಲಿ. ಬಿಜೆಪಿ ಸಂಸದರಿಗೆ ಧಮ್ ಇದ್ದರೆ ‘ನಮ್ಮ ಮೆಟ್ರೊ’ ಪ್ರಯಾಣ ದರ ಕಡಿಮೆ ಮಾಡಿಸಲಿ ಅದನ್ನು ಬಿಟ್ಟು ಪ್ರಯಾಣ ದರ ಹೆಚ್ಚು ಮಾಡಿದಾಗ ರಾಜ್ಯ ಸರ್ಕಾರದ ವಿರುದ್ದ ಗೂಬೆ ಕೂರಿಸುವುದು, ಕಡಿಮೆ ಮಾಡಿದಾಗ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುವುದು ಅಲ್ಲ
ನಾವು ಬಸ್ ಪ್ರಯಾಣ ದರ ಏರಿಕೆ ಮಾಡಿದಾಗ ಇದೇ ಬಿಜೆಪಿ ನಾಯಕರು ಗುಲಾಬಿ ಹೂ ಹಿಡಿದುಕೊಂಡು ಬಸ್ ನಿಲ್ದಾಣಕ್ಕೆ ಹೋಗಿ ಪ್ರಯಾಣಿಕರ ಬಳಿ ಕ್ಷಮೆ ಕೇಳಿದ್ದರು.
ಈಗಲೂ ಬಿಜೆಪಿ ನಾಯಕರು ಮೆಟ್ರೊ ನಿಲ್ದಾಣಕ್ಕೆ ಹೋಗಿ ಪ್ರಧಾನಿ ನರೇಂದ್ರ ಮೋದಿ ಪರವಾಗಿ ಕ್ಷಮೆ ಕೇಳಲಿ. ಬೇಕಿದ್ದರೆ ಗುಲಾಬಿ ಹೂ ನಾವೇ ಖರೀದಿಸಿ ಕೊಡುತ್ತೇವೆ’ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಗೆ ಟಾಂಗ್ ನೀಡಿದರು.