ದೊಡ್ಡಬಳ್ಳಾಪುರ (Doddaballapura): ನಗರದ ಸರ್ಕಾರಿ ಪಿಯು ಕಾಲೇಜಿನ ಪಾದಚಾರಿ ಮಾರ್ಗದಲ್ಲಿ ಆಟೋದಲ್ಲಿ ಹಣ್ಣು ಮಾರಾಟ ಮಾಡುತ್ತಿದ್ದವರನ್ನು ಖಾಲಿ ಮಾಡಿಸಲು ಬೀದಿ ಬದಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಮುಂದಾದಾಗ ಬಡೆದಿದ್ದ ಮಾತಿನ ಚಕಮಕಿ ಕುರಿತು ಇಂದು ಪೊಲೀಸರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಅನ್ನದಾತ ರೈತರು ಬೆಳೆದ ಬೆಳೆಯನ್ನು ಮಾರಾಟ ಮಾಡಲು ವರ್ತಕರ ಆಕ್ಷೇಪ ಎಂಬ ಕುರಿತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಅಮರೇಶ್ ಗೌಡ ಅವರು ವರ್ತಕರ ಸಭೆ ನಡೆಸಿದ್ದಾರೆ.
ನಗರದ ಪೊಲೀಸ್ ಠಾಣೆ ಆವರಣದಲ್ಲಿ ವರ್ತಕ ಸಂಘದ ಪ್ರತಿನಿಧಿಗೊಂದಿಗೆ ಮಾತನಾಡಿ, ರೈತರ ವ್ಯಾಪಾರಕ್ಕೆ ಅಡ್ಡಿ ಮಾಡದಂತೆ ಸೂಚನೆ ನೀಡಿದ್ದು, ತೊಂದರೆಯಾದರೆ ಯಾವುದೇ ಕಾನೂನು ಉಲ್ಲಂಘನೆ ಮಾಡದೇ, ನಗರಸಭೆ ಆಯ್ತುಕ್ತರಿಗೆ ದೂರು ನೀಡುವಂತೆ ಸಲಹೆ ನೀಡಿದ್ದಾರೆಂದು ತಿಳಿದು ಬಂದಿದೆ.
ಮಾತಿನ ಚಕಮಕಿ
ನಿನ್ನೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯ ಸರ್ಕಾರಿ ಪಿಯು ಕಾಲೇಜಿನ ಪಾದಚಾರಿ ಮಾರ್ಗದಲ್ಲಿ ಆಟೋದಲ್ಲಿ ಹಣ್ಣು ಮಾರಾಟ ಮಾಡುತ್ತಿದ್ದವರನ್ನು ಖಾಲಿ ಮಾಡಿಸಲು ಬೀದಿ ಬದಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಮುಂದಾದಾಗ ಮಾತಿನ ಚಕಮಕಿ ನಡೆದಿತ್ತು.
ಪರಿಸ್ಥಿತಿ ಕೈಮೀರುತ್ತಿದ್ದಂತೆ ಪೊಲೀಸರ ಮಧ್ಯ ಪ್ರವೇಶ ಮಾಡಿ ಎಲ್ಲರನ್ನು ಚದುರಿಸಿದರು.
‘ನಗರದಲ್ಲಿ ಎಲ್ಲೆಂದರಲ್ಲಿ ಹೊರಗಿನವರು ಬಂದು ಟೆಂಪೋ, ಆಟೋಗಳಲ್ಲಿ ಹಣ್ಣುಗಳ ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ತಳ್ಳುವ ಗಾಡಿಗಳಲ್ಲಿ ಬಸ್ ನಿಲ್ದಾಣದಲ್ಲಿ ಹಣ್ಣುಗಳ ವ್ಯಾಪಾರ ಮಾಡುತ್ತ ಜೀವನ ನಡೆಸುತ್ತಿರುವವರಿಗೆ ವ್ಯಾಪಾರವೇ ಇಲ್ಲದಾಗಿದೆ.
ನಗರಸಭೆ ವತಿಯಿಂದ ಬೀದಿ ಬದಿ ವ್ಯಾಪಾರಿಗಳ ಗುರುತಿನ ಚೀಟಿ ಪಡೆದು ನಿಗದಿತ ಬೆಲೆಗೆ ಹಣ್ಣುಗಳನ್ನು ಮಾರಾಟ ಮಾಡುತ್ತಿರುವ ವ್ಯಾಪಾರಿಗಳಿಗೆ ತೊಂದರೆಯಾಗುತ್ತಿದೆ.
ವಾಹನಗಳು ಸಂಚರಿಸುವ ರಸ್ತೆ ಬದಿಗಳಲ್ಲಿ ಆಟೋ, ಟೆಂಪೋಗಳನ್ನು ನಿಲ್ಲಿಸಿಕೊಂಡು ವ್ಯಾಪಾರ ಮಾಡುವುದರಿಂದ ಅಪಘಾತಗಳು ನಡೆಯುತ್ತಿವೆ. ಹಾಗಾಗಿ ನಿಗದಿತ ಸ್ಥಳದಲ್ಲೇ ತಳ್ಳುವ ಗಾಡಿಯಲ್ಲೇ ವ್ಯಾಪಾರ ನಡೆಸಬೇಕು’ ಎಂದು ಬೀದಿ ಬದಿ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಬಿ.ನರೇಶ್ ಕುಮಾರ್ ಹಾಗೂ ಮುಖಂಡರು ಆಗ್ರಹಿಸಿದ್ದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕರವೇ ಕನ್ನಡಿಗರ ಬಣದ ಮುಖಂಡ ನರೇಂದ್ರ, ಜೆಡಿಎಸ್ ಮುಖಂಡ ನಾಗರಾಜ್, ರೈತ ಸಂಘದ ಮುಖಂಡ ಬ್ಯಾಡರಹಳ್ಳಿ ನಟರಾಜ್, ‘ಇಲ್ಲಿನ ರಸ್ತೆ ಬದಿಯಲ್ಲಿ ಹಣ್ಣುಗಳನ್ನು ವ್ಯಾಪಾರ ಮಾಡುತ್ತಿರುವುದು ನಮ್ಮದೇ ತಾಲ್ಲೂಕಿನ ಸಾಸಲು ಗ್ರಾಮದ ನಿವಾಸಿ.
ತಾಲ್ಲೂಕಿನ ರೈತರ ತೋಟಗಳಿಂದ ಸೀಬೆ, ದಾಳಿಂಬೆ, ದ್ರಾಕ್ಷಿ ಜೊತೆಗೆ ಹೊರಗಿನಿಂದ ಕಿತ್ತಳೆ, ಸೇಬು ಸಹ ತಂದು ಮಾರಾಟ ಮಾಡುತ್ತಿದಾನೆ. ಆದರೆ ನಗರದಲ್ಲಿನ ಹಣ್ಣಿನ ವ್ಯಾಪಾರಿಗಳು ಹಳ್ಳಿ ಕಡೆಯವರು ನಗರದಲ್ಲಿ ಬಂದು ಹಣ್ಣು ಮಾರಾಟ ಮಾಡಬಾರದು ಎಂದು ಬೇದರಿಕೆ ಹಾಕುವುದು ಎಷ್ಟರ ಮಟ್ಟಿಗೆ ಸರಿ.
ಕಡಿಮೆ ಬೆಲೆಗೆ ಮಾರಾಟ ಮಾಡುವುದನ್ನು ಪ್ರಶ್ನಿಸುವ ಅಧಿಕಾರ ಇವರಿಗೆ ನೀಡಿದವರು’ ಎಂದು ಪ್ರಶ್ನಿಸಿದ್ದರು.
ಇಡೀ ದೇಶದಲ್ಲಿ ಯಾರು ಎಲ್ಲಿಬೇಕಾದರು ವ್ಯಾಪಾರ ಮಾಡುವ, ಜೀವಿಸುವ ಹಕ್ಕು ಸಂವಿಧಾನ ನೀಡಿದೆ. ಇಂತಹ ನೈತಿ ಪೊಲೀಸ್ಗಿರಿ ಪ್ರಕರಣ ಮರುಕಳಿಸದಂತೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.